
ಬೆಂಗಳೂರು: ‘ಆಯೋಗದ ಸಲಹೆ, ಸೂಚನೆ ನಿರ್ಲಕ್ಷಿಸಿ ಬೇಕಾಬಿಟ್ಟಿ ಯೋಜನೆಗಳನ್ನು ರೂಪಿಸುತ್ತಿದ್ದು, ಹಣ ವ್ಯರ್ಥವಾಗಿ ಖರ್ಚಾಗುತ್ತಿದೆ. ಹಲವು ಯೋಜನೆಗಳು ಜನರನ್ನು ತಲುಪದೆ ವಿಫಲವಾಗುತ್ತಿವೆ’ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಹೇಳಿದರು.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸೋಮವಾರ ಆಯೋಜಿಸಿದ್ದ ‘ಅಗತ್ಯ ಪುರಾವೆ ಮತ್ತು ಫಲಿತಾಂಶ ಆಧಾರಿತ ನೀತಿ ಮತ್ತು ಯೋಜನೆ’ಯ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯೋಗ ನೀಡುವ ವರದಿಯನ್ನು ಬಜೆಟ್‌ನಲ್ಲಿ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ತಳಮಟ್ಟದ ಬೇಡಿಕೆಗಳನ್ನು ಈಡೇರಿಸಲು ಎಲ್ಲಾ ಜಿಲ್ಲಾ ಮಟ್ಟದ ಸಭೆಗಳ ವರದಿಯನ್ನು ಜ.25ರ ಒಳಗೆ ತರಿಸಿಕೊಳ್ಳಲಾಗುವುದು. ಶಿಕ್ಷಣ, ಕೌಶಲ, ಆರೋಗ್ಯ, ಪೋಷಣೆ, ನೈರ್ಮಲ್ಯ, ನೀರು ಸರಬರಾಜು, ಪರಿಸರ, ಕೃಷಿ, ಮಹಿಳಾ ಮತ್ತು ಮಕ್ಕಳ, ಕಾರ್ಮಿಕ, ಸಮಾಜ ಕಲ್ಯಾಣ ಇಲಾಖೆಗಳಿಗೆ ಒಳ್ಳೆಯ ಯೋಜನೆಗಳನ್ನು ಸೇರಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇಲಾಖಾ ದತ್ತಾಂಶ ವ್ಯವಸ್ಥೆಗಳ ಏಕೀಕರಣ, ಸಮನ್ವಯದಲ್ಲಿ ಸುಧಾರಣೆಯ ಅಗತ್ಯವಿದೆ. ದತ್ತಾಂಶ ಸಾಕ್ಷರತೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕೌಶಲಗಳಲ್ಲಿ ನಿರಂತರ ಹೂಡಿಕೆಯ ಅಗತ್ಯವಿದೆ. ಯೋಜನಾ ಆಯೋಗವನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಮಾತನಾಡಿ, ‘ಈ ಬಾರಿಯ ಬಜೆಟ್‌ನಲ್ಲಿ ಕೆಲ ಇಲಾಖೆಗಳಿಗೆ ಆದ್ಯತೆಯನ್ನು ನೀಡಲಾಗಿದೆ. 2027-28ನೇ ಸಾಲಿನ ಯೋಜನೆಗಳು ಜನರ ಯೋಜನೆಗಳಾಗಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.