ADVERTISEMENT

ಬಂಗಾಳ ವಿಧಾನಸಭೆಯಲ್ಲಿ ಶಾಸಕರ ಮಾರಾಮಾರಿ: 8 ಶಾಸಕರು ಆಸ್ಪತ್ರೆಗೆ, ಐವರ ಅಮಾನತು

ಆಸ್ಪತ್ರೆ ಸೇರಿದ ಎಂಟು ಶಾಸಕರು; ಐವರ ಅಮಾನತು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 20:13 IST
Last Updated 28 ಮಾರ್ಚ್ 2022, 20:13 IST
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಶಾಸಕರ ನಡುವೆ ಮಾರಾಮಾರಿ ನಡೆಯಿತು –ಪಿಟಿಐ ಚಿತ್ರ
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಶಾಸಕರ ನಡುವೆ ಮಾರಾಮಾರಿ ನಡೆಯಿತು –ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ಬಜೆಟ್‌ ಅಧಿವೇಶದನಲ್ಲಿ ಸೋಮವಾರ ಶಾಸಕರ ನಡುವೆ ಮಾರಾಮಾರಿ ನಡೆದಿದೆ. ಭಿರ್‌ಭೂಮ್ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಬಿಜೆಪಿಯ ಏಳು ಹಾಗೂ ಟಿಎಂಸಿಯ ಒಬ್ಬರು ಸೇರಿದಂತೆ ಎಂಟು ಶಾಸಕರು ಗಾಯಗೊಂಡಿದ್ದಾರೆ.

ಘಟನೆ ಸಂಬಂಧ ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಒಳಗೊಂಡಂತೆ ಐವರು ಬಿಜೆಪಿ ಶಾಸಕರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಿದ್ದಾರೆ.

ಕಳೆದ ವಾರ, ಟಿಎಂಸಿ ಉಪ ಪ್ರಧಾನನ ಹತ್ಯೆಗೆ ಪ್ರತೀಕಾರವಾಗಿ ರಾಮ್‌ಪುರಹಾಟ್‌ನಲ್ಲಿ ಎಂಟು ಜನರ ಸಜೀವ ದಹನ ಆಗಿತ್ತು. ಈ ಘಟನೆಯ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಮುಂದಾಯಿತು. ಬಿಜೆ‍ಪಿ–ಟಿಎಂಸಿ ಸದಸ್ಯರು ಪರಸ್ಪರ ಆರೋಪ–ಪ್ರತ್ಯಾರೋಪದಲ್ಲಿ ತೊಡಗಿದರು.

ADVERTISEMENT

‘ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದಾಗ, ಸದನದಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಟಿಎಂಸಿ ಶಾಸಕರು ನಮ್ಮನ್ನು ತಡೆದರು’ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ. ಶಾಸಕರ ನಡುವಿನ ವಾಕ್ಸಮರವು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಟಿಎಂಸಿ ಶಾಸಕರು ಹಾಗೂ ಭದ್ರತಾ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಬಿಜೆಪಿ ಶಾಸಕಿಯರು ಆರೋಪಿಸಿದ್ದಾರೆ.

ಬಿಜೆಪಿಯ 8–10 ಶಾಸಕರು ಗಾಯಗೊಂಡಿದ್ದಾರೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಪಕ್ಷದ ಏಳು ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರತಿಪಕ್ಷದ ಆರೋಪಕ್ಕೆ ಟಿಎಂಸಿ ಸದಸ್ಯರಾದ ಪಾರ್ಥ ಚಟರ್ಜಿ, ಫರ್ಹಾದ್ ಹಕೀಮ್, ಚಂದ್ರಿಮ ಭಟ್ಟಾಚಾರ್ಯ ಮೊದಲಾದವರು ತಿರುಗೇಟು ನೀಡಿದ್ದಾರೆ. ಬಿಜೆಪಿಯ ಕೆಲವು ಜನಪ್ರತಿನಿಧಿಗಳ ಆಕ್ರಮಣಕಾರಿ ನಡವಳಿಕೆಯನ್ನು ಖಂಡಿಸಿದ್ದಾರೆ. ಶಾಸಕಿಯರ ಜೊತೆಗೆ ಮಹಿಳಾ ಭದ್ರತಾ ಸಿಬ್ಬಂದಿ ಸಹ ದಾಳಿಗೆ ಗುರಿಯಾಗಿದ್ದಾರೆ. ಟಿಎಂಸಿ ಶಾಸಕ ಅಸಿತ್ ಮಜುಂದಾರ್ ಅವರ ಮೂಗಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳಾ ಭದ್ರತಾ ಸಿಬ್ಬಂದಿ ಮೇಲೆಯೂ ಹಲ್ಲೆ ನಡೆದಿರುವುದನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಖಂಡಿಸಿದ್ದಾರೆ.

ಹಲ್ಲೆಗೊಳಗಾದ ಬಿಜೆಪಿ ಸದಸ್ಯರನ್ನೇ ಸದನದಿಂದ ಅಮಾನತು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದ್ದಾರೆ. ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿಯಾಗಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಸಾವಿನ ಸಂಖ್ಯೆ 9ಕ್ಕೆ ಏರಿಕೆ: ರಾಮ್‌ಪುರಹಾಟ್‌ ಸಜೀವ ದಹನ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.