ADVERTISEMENT

ಹಿಲೋರಿಗೆ 25 ಕೆ.ಜಿ ಚಿನ್ನ, ₹13 ಕೋಟಿ ಮಾಮೂಲು!

ಹೇಳಿಕೆ ಅಲ್ಲಗಳೆದ ಐಪಿಎಸ್‌ ಅಧಿಕಾರಿ

ಹೊನಕೆರೆ ನಂಜುಂಡೇಗೌಡ
Published 24 ಸೆಪ್ಟೆಂಬರ್ 2019, 19:39 IST
Last Updated 24 ಸೆಪ್ಟೆಂಬರ್ 2019, 19:39 IST
   

ಬೆಂಗಳೂರು: ‘ಪೂರ್ವ ವಲಯ ಉಪ ಪೊಲೀಸ್‌ ಕಮಿಷನರ್‌ ಆಗಿದ್ದ ಐಪಿಎಸ್ ಅಧಿಕಾರಿ ಅಜಯ್‌ ಹಿಲೋರಿ ಅವರಿಗೆ 25 ಕೆ.ಜಿ ಚಿನ್ನ ಮತ್ತು ₹ 13 ಕೋಟಿ ಮಾಮೂಲು ನೀಡಲಾಗಿದೆ’ ಎಂದು ಐಎಂಎ (ಐ ಮಾನಿಟರಿ ಅಡ್ವೈಸರಿ) ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

‘ಹಿಲೋರಿ ಬೇರೆ ಬೇರೆಯವರಿಗೆ ಕೊಡಬೇಕು ಎಂದು ಹೇಳಿ 25 ಕೆ.ಜಿ ಚಿನ್ನ ತೆಗೆದುಕೊಂಡಿದ್ದಾರೆ. ಅಲ್ಲದೆ, ತಿಂಗಳಿಗೆ ₹ 1 ಕೋಟಿಯಂತೆ ಒಟ್ಟು ₹ 13 ಕೋಟಿ ಮಾಮೂಲು ಪಡೆದಿದ್ದಾರೆ’ ಎಂದು ಮನ್ಸೂರ್ ಖಾನ್‌ ರಾಜ್ಯದ ವಿಶೇಷ ತನಿಖಾ ದಳ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮುಂದೆ ಹೇಳಿದ್ದಾರೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ತಿಳಿಸಿವೆ.

ಖಾನ್‌ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ವೀಡಿಯೊ ಚಿತ್ರೀಕರಣವನ್ನೂ ಮಾಡಲಾಗಿದೆ. ಈಗಾಗಲೇ ಇಲ್ಲಿನ ವಿಶೇಷ ಸಿಬಿಐ ಕೋರ್ಟ್‌ನಲ್ಲಿ ಸಲ್ಲಿಸಿರುವ ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ, ‘ಪ್ರಮುಖ ಆರೋಪಿಯು ದೊಡ್ಡ ಪ್ರಮಾಣದ ಹಣವನ್ನು ಹಲವರಿಗೆ ಲಂಚವಾಗಿ ನೀಡಿದ್ದಾರೆ’ ಎಂದೂ ಸಿಬಿಐ ಆರೋಪಿಸಿದೆ.

ADVERTISEMENT

ಈ ಆರೋಪವನ್ನು ಹಿಲೋರಿ ಅಲ್ಲಗೆಳೆದಿದ್ದಾರೆ. ‘ತಾವು ಮನ್ಸೂರ್ ಖಾನ್‌ ಅವರನ್ನು ಅನೇಕ ಸಲ ಭೇಟಿ ಆಗಿದ್ದು ನಿಜ. ಆದರೆ, ಅವರಿಂದ ಚಿನ್ನವನ್ನಾಗಲೀ, ಹಣವನ್ನಾಗಲೀ ತೆಗೆದುಕೊಂಡಿಲ್ಲ’ ಎಂದು ಎಸ್‌ಐಟಿಗೆ ತಿಳಿಸಿದ್ದಾರೆ. ಹಿಲೋರಿ ಅವರನ್ನು ಎಸ್‌ಐಟಿ ಸುದೀರ್ಘ ವಿಚಾರಣೆ ನಡೆಸಿತ್ತು. ‌ಯಾವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಖಾನ್‌ ಲಂಚ ನೀಡಿದ್ದಾರೆ ಎಂಬುದು ಖಚಿತವಾದ ಬಳಿಕ ಈ ಬಗ್ಗೆ ಇ.ಡಿ ತನಿಖೆ ನಡೆಸುವ ಸಾಧ್ಯತೆಯಿದೆ.

***

ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾರೊಂದಿಗೂ ಮಾತನಾಡಲು ಬಯಸುವುದಿಲ್ಲ
-ಅಜಯ್‌ ಹಿಲೋರಿ, ಕಮಾಂಡೆಂಟ್‌, ಕೆಎಸ್‌ಆರ್‌ಪಿ 1ನೇ ಬೆಟಾಲಿಯನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.