ADVERTISEMENT

ಸಿಂಧುತ್ವ ಪ್ರಮಾಣಪತ್ರಕ್ಕೆ ಲಂಚ: ಉಪ ತಹಶೀಲ್ದಾರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 11:04 IST
Last Updated 15 ಸೆಪ್ಟೆಂಬರ್ 2022, 11:04 IST
   

ಬೆಂಗಳೂರು: ಜಮೀನಿನ ಒಡೆತನಕ್ಕೆ ಸಂಬಂಧಿಸಿದ ಸಿಂಧುತ್ವ ಪ್ರಮಾಣ ಪತ್ರ ನೀಡಲು ₹45,000 ಲಂಚ ಪಡೆಯುತ್ತಿದ್ದ ಬೆಂಗಳೂರು ಉತ್ತರ ತಾಲ್ಲೂಕು ಕಚೇರಿಯ ಉಪ ತಹಶೀಲ್ದಾರ್‌ ಪಿ.ಎಂ. ಶ್ರೀಕಾಂತ್‌ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ರಘುಶಂಕರ್‌ ಎಬುವವರಯ ಯಶವಂತಪುರ ಹೋಬಳಿ ಕೊಡಿಗೆಹಳ್ಳಿಯಲ್ಲಿ ಹೊಂದಿರುವ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನಿನ ಬಾಬ್ತು ಪರಿಹಾರದ ಮೊತ್ತ ಪಡೆಯಲು ಜಮೀನು ಮಾಲೀಕರು ಸಿಂಧುತ್ವ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಇದಕ್ಕಾಗಿ ಸಿಂಧುತ್ವ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು.

ಶ್ರೀಕಾಂತ್‌ ಅವರನ್ನು ಭೇಟಿಮಾಡಿದ್ದ ರಘುಶಂಕರ್‌, ಸಿಂಧುತ್ವ ಪ್ರಮಾಣಪತ್ರ ನೀಡುವಂತೆ ಮನವಿ ಮಾಡಿದ್ದರು. ₹ 13 ಲಕ್ಷ ಲಂಚ ನೀಡುವಂತೆ ಅಧಿಕಾರಿ ಆರಂಭದಲ್ಲಿ ಬೇಡಿಕೆ ಇಟ್ಟಿದ್ದರು. ನಂತರ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ₹ 45,000 ನೀಡಿದರೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಆರೋಪಿ ಅಧಿಕಾರಿ ಹೇಳಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ವಿಭಾಗಕ್ಕೆ ದೂರು ಸಲ್ಲಿಸಿದ್ದರು.

ADVERTISEMENT

ಆರೋಪಿಯ ಸೂಚನೆಯಂತೆ ಉಪ ತಹಶೀಲ್ದಾರ್‌ ಕಚೇರಿಗೆ ಗುರುವಾರ ತೆರಳಿದ ದೂರುದಾರರು ಲಂಚದ ಹಣ ತಲುಪಿಸಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಶ್ರೀಕಾಂತ್‌ ಅವರನ್ನು ಬಂಧಿಸಿದರು.

ಲೋಕಾಯುಕ್ತ ಬಿ.ಎಸ್‌. ಪಾಟೀಲ ಅವರ ಸೂಚನೆಯಂತೆ ಸಂಸ್ಥೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌ ಮತ್ತು ಬೆಂಗಳೂರು ನಗರ ಎಸ್‌ಪಿ ಅಶೋಕ್‌ ಕೆ.ವಿ. ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಶಂಕರನಾರಾಯಣ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.