ADVERTISEMENT

ಲಂಚ ವಾಪಸ್ ಮಾಡುವಾಗ ಕೆಎಎಸ್‌ ಅಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 20:24 IST
Last Updated 21 ಸೆಪ್ಟೆಂಬರ್ 2022, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವ್ಯಕ್ತಿಯೊಬ್ಬರ ಜಮೀನು ಭೂಸ್ವಾಧೀನಗೊಂಡಿಲ್ಲ ಎಂದು ನಿರಾಕ್ಷೇಪಣಾ ಪತ್ರ ನೀಡಲು ₹ 2.5 ಲಕ್ಷ ಲಂಚ ಪಡೆದು, ಈ ಬಗ್ಗೆ ದೂರು ದಾಖಲಾದ ಬಳಿಕ ಲಂಚದ ಹಣವನ್ನು ಮರಳಿಸುತ್ತಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಭೂಮಾಪಕರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಯಲ್ಲಿದ್ದ ಕೆಎಎಸ್‌ ಅಧಿಕಾರಿ ಎ.ಬಿ. ವಿಜಯಕುಮಾರ್‌ ಮತ್ತು ಅವರ ಕಚೇರಿಯ ಭೂಮಾಪಕ ರಘುನಾಥ್‌ ಬಂಧಿತರು.

ಬೆಂಗಳೂರು ಉತ್ತರ ತಾಲ್ಲೂಕಿನ ಲಗ್ಗೆರೆ ಹೋಬಳಿಯಲ್ಲಿರುವ 30 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ₹ 2.5 ಲಕ್ಷ ಲಂಚ ಪಡೆದುಕೊಂಡು ಆರೋಪಿಗಳು ನಿರಾಕ್ಷೇಪಣಾ ಪತ್ರ ನೀಡಿದ್ದರು. ಈ ಕುರಿತು ಅರ್ಜಿದಾರರು ಕೆಐಎಡಿಬಿ ಉಪ ಆಯುಕ್ತರಿಗೆ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆ ದೂರುದಾರರನ್ನು ಸಂಪರ್ಕಿಸಿದ್ದ ಆರೋಪಿಗಳು, ದೂರನ್ನು ಹಿಂಪಡೆದರೆ ₹ 2.5 ಲಕ್ಷದೊಂದಿಗೆ ₹ 50,000 ಸೇರಿಸಿ ವಾಪಸ್‌ ನೀಡುವುದಾಗಿ ಆಮಿಷ ಒಡ್ಡಿದ್ದರು. ದೂರುದಾರರಿಗೆಹಣ ವಾಪಸ್‌ ನೀಡುತ್ತಿದ್ದಾಗ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.