ADVERTISEMENT

ಲಂಚ ಪ್ರಕರಣ: ಮಾಡಾಳ್‌ ವಿರುದ್ಧ ಮತ್ತೆರಡು ಎಫ್‌ಐಆರ್‌ಗೆ ಲೋಕಾಯುಕ್ತ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 19:31 IST
Last Updated 7 ಮಾರ್ಚ್ 2023, 19:31 IST
ಕೆ. ಮಾಡಾಳ್‌ ವಿರೂಪಾಕ್ಷಪ್ಪ
ಕೆ. ಮಾಡಾಳ್‌ ವಿರೂಪಾಕ್ಷಪ್ಪ   

ಬೆಂಗಳೂರು: ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧದ ಲಂಚ ಪ್ರಕರಣದಲ್ಲಿ ಇನ್ನೂ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಕ್ರೆಸೆಂಟ್‌ ರಸ್ತೆಯ ಖಾಸಗಿ ಕಚೇರಿಯಲ್ಲಿ ₹ 40 ಲಕ್ಷ ಲಂಚ ಪಡೆಯುತ್ತಿದ್ದಾಗ ಶಾಸಕರ ಮಗ, ಬೆಂಗಳೂರು ಜಲಮಂಡಳಿಯ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌ ಅವರನ್ನು ಬಂಧಿಸಲಾಗಿತ್ತು. ಅದೇ ಸಂದರ್ಭದಲ್ಲಿ ₹1.62 ಕೋಟಿ ನಗದನ್ನು ತಲುಪಿಸಿದ ಕರ್ನಾಟಕ ಅರೋಮಾಸ್‌ ಕಂಪನಿಯ ಆಲ್ಬರ್ಟ್‌ ನಿಕೋಲಸ್‌ ಮತ್ತು ಗಂಗಾಧರ್‌ ಎಂಬುವವರನ್ನು ಬಂಧಿಸಲಾಗಿತ್ತು. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.

ಸಂಜಯನಗರದಲ್ಲಿರುವ ವಿರೂಪಾಕ್ಷಪ್ಪ ಮನೆ ಮೇಲೆ ಗುರುವಾರ ರಾತ್ರಿ ದಾಳಿಮಾಡಿದ್ದ ಲೋಕಾಯುಕ್ತ ಪೊಲೀಸರು, ಶೋಧ ನಡೆಸಿದ್ದರು. ಶಾಸಕರ ಮಲಗುವ ಕೋಣೆಯಲ್ಲಿ ₹ 6.10 ಕೋಟಿ ನಗದು ಪತ್ತೆಯಾಗಿತ್ತು. ಈ ಬಗ್ಗೆಯೂ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ADVERTISEMENT

‘₹ 40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಆರೋಪಕ್ಕೆ ಸೀಮಿತವಾಗಿ ಮೊದಲ ಎಫ್‌ಐಆರ್‌ ದಾಖಲಿಸಲಾಗಿತ್ತು. ₹ 1.62 ಕೋಟಿ ಕೋಟಿ ಹಣ ತಲುಪಿಸಿರುವುದು ಹಾಗೂ ಶಾಸಕರ ಮನೆಯಲ್ಲಿ ₹ 6.10 ಕೋಟಿ ನಗದು ಪತ್ತೆಯಾಗಿರುವುದು ಆ ಪ್ರಕರಣದ ಭಾಗವಾಗಿರಲಿಲ್ಲ. ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ಕಾನೂನು ತಜ್ಞರ ಅಭಿಪ್ರಾಯ ಕೋರಲಾಗಿದೆ’ ಎಂದು ಲೋಕಾಯುಕ್ತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಚನ್ನಗಿರಿ ತಾಲ್ಲೂಕಿನ ಚನ್ನೇಶಪುರದಲ್ಲಿರುವ ವಿರೂಪಾಕ್ಷಪ್ಪ ಅವರ ಮನೆ ಮೇಲೆ ದಾಳಿಮಾಡಿದ್ದ ಲೋಕಾಯುಕ್ತದ ದಾವಣಗೆರೆ ಜಿಲ್ಲಾ
ಘಟಕದ ಪೊಲೀಸರು, ಶೋಧ ನಡೆಸಿದ್ದರು. ಶಾಸಕರ ಕುಟುಂಬವು ಅಪಾರ ಪ್ರಮಾಣದ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಮನೆಯಲ್ಲಿ ಪತ್ತೆಯಾಗಿದ್ದವು. ಅವುಗಳನ್ನು ಪರಿಶೀಲಿಸಿದ ಬಳಿಕ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಡಿ ಮತ್ತೊಂದು ಪ್ರಕರಣ ದಾಖಲಿಸುವ ಕುರಿತೂ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.