ADVERTISEMENT

ಸ್ಯಾಂಟ್ರೋ ರವಿ ಶೀಘ್ರ ಬೆಂಗಳೂರಿಗೆ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 12:48 IST
Last Updated 13 ಜನವರಿ 2023, 12:48 IST
   

ಉಡುಪಿ: ಗುಜರಾತ್‌ನಲ್ಲಿ ಸ್ಯಾಂಟ್ರೋ ರವಿ ಬಂಧವನಾಗಿದ್ದು ಬೆಂಗಳೂರಿಗೆ ಕರೆತರುವ ಪ್ರಕ್ರಿಯೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಮೈಸೂರು ಹಾಗೂ ರಾಮನಗರ ಜಿಲ್ಲೆಯ ಪೊಲೀಸರು 11 ದಿನಗಳಿಂದ ಸ್ಯಾಂಟ್ರೋ ರವಿ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದರು. ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ.

ಸ್ಯಾಂಟ್ರೋ ರವಿಯನ್ನು ಬಂಧಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂಬ ಟೀಕೆಗಳಿಗೆ ಉತ್ತರ ಸಿಕ್ಕಿದೆ. ಆರೋಪಿಯನ್ನು ಗುಜರಾತ್‌ ನ್ಯಾಯಾಲಯದಲ್ಲಿ ಹಾಜರುಪಡಿಸಿ ಶುಕ್ರವಾರ ಅಥವಾ ಶನಿವಾರ ಬೆಂಗಳೂರಿಗೆ ಕರೆತರಲಾಗುವುದು.

ADVERTISEMENT

ಪ್ರಕರಣದಲ್ಲಿ ಅತ್ಯಂತ ಪಾರದರ್ಶಕವಾಗಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯಲಿದೆ. ಅಧಿಕಾರಿಗಳು ಅಥವಾ ರಾಜಕಾರಣಿಗಳು ಭಾಗಿಯಾಗಿದ್ದರೆ ತನಿಖೆಯಲ್ಲಿ ಬಯಲಾಗಲಿದೆ. ಸ್ಯಾಂಟ್ರೋ ರವಿಯ ಸಹಚರರನ್ನೂ ಬಂಧಿಸಲಾಗುವುದು. ಆತನ ಎಲ್ಲ ಕೃತ್ಯಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದರು.

ಮಂಗಳೂರು ಪೊಲೀಸರು ಡ್ರಗ್ಸ್ ದಂಧೆಯ ವಿರುದ್ಧ ಕಾನೂನು ಕ್ರಮ ಜರುಗಿಸಿರುವುದು ಅಭಿನಂದನೀಯ. ಡ್ರಗ್ಸ್‌ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಆದ್ಯತೆಯಾಗಿದೆ. ಡ್ರಗ್ಸ್‌ ದಂಧೆಯಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರಂತಹ ವಿದ್ಯಾವಂತರು ಭಾಗಿಯಾಗಿರುವುದು ದುರದೃಷ್ಟಕರ.

ಬಂಧಿತರಲ್ಲಿ ಓರ್ವ ಅಮೆರಿಕದ ನಾಗರಿಕನಾಗಿದ್ದು, ಐದಾರು ವರ್ಷಗಳಿಂದ ಇಲ್ಲಿಯೇ ನೆಲೆಸಿರುವ ವಿಚಾರ ತಿಳಿದು ಬಂದಿದೆ. ಮಾದಕ ವಸ್ತುಗಳನ್ನು ಸೇವಿಸಿದವರು ಹಾಗೂ ಪೆಡ್ಲರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ದಂಧೆಯಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳ ಬಂಧನವಾಗಲಿದೆ ಎಂದು ಗೃಹ ಸಚಿವರು ಹೇಳಿದರು.

ಬಯಲು ಸೀಮೆಯಲ್ಲಿ ಹೊಸದಾಗಿ ಅಡಿಕೆ ತೋಟ ಮಾಡಲು ಸರ್ಕಾರ ಪ್ರೋತ್ಸಾಹ ಕೊಡಬಾರದು. ವರ್ಷಕ್ಕೆ ಒಂದು ಕೋಟಿ ಅಡಿಕೆ ಗಿಡಗಳು ಮಾರಾಟವಾಗುತ್ತಿದ್ದು ಹೊಸದಾಗಿ ತೋಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆಂಧ್ರ ಪ್ರದೇಶದಲ್ಲಿ‌ ಎರಡು ಸಾವಿರ ಎಕರೆ ಅಡಕೆ ಫಸಲಿಗೆ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಡಿಕೆಯನ್ನು ಜಗಿದು ಉಗಿಯಲು ಬಿಟ್ಟರೆ ಪರ್ಯಾಯ ಉಪಯೋಗಗಳಿಗೆ ಬಳಸಲಾಗುತ್ತಿಲ್ಲ. ಅಡಿಕೆಗೆ ಬಂದಿರುವ ಬೆಲೆಯೂ ಶಾಪವಾಗಿ ಪರಿಣಮಿಸಿದೆ. ಅಡಿಕೆಯನ್ನು ಪರಂಪರಾಗತವಾಗಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಬೆಳೆಯಲಾಗುತ್ತಿದ್ದು ಈ ಭಾಗದ ರೈತರಿಗೆ ಸಮಸ್ಯೆಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.