ADVERTISEMENT

ಕುತೂಹಲ ಮೂಡಿಸಿದ ಬಿಎಸ್‌ವೈ– ಡಿಕೆಶಿ ಭೇಟಿ!

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 20:41 IST
Last Updated 28 ನವೆಂಬರ್ 2018, 20:41 IST
ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಬಿ.ಎಸ್‌. ಯಡಿಯೂರಪ್ಪ ಬುಧವಾರ ಭೇಟಿ ಮಾಡಿದರು – ಪ್ರಜಾವಾಣಿ ಚಿತ್ರ
ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಬಿ.ಎಸ್‌. ಯಡಿಯೂರಪ್ಪ ಬುಧವಾರ ಭೇಟಿ ಮಾಡಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಕಾಂಗ್ರೆಸ್‌ ಪ್ರಭಾವಿ ನಾಯಕ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಕೆಲಹೊತ್ತು ರಹಸ್ಯವಾಗಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ಶಿವಕುಮಾರ್‌ ಅವರ ಸರ್ಕಾರಿ ನಿವಾಸಕ್ಕೆ ಬುಧವಾರ ಬೆಳಿಗ್ಗೆ ತೆರಳಿದ ಯಡಿಯೂರಪ್ಪ, ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತಂತೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಶಾಸಕ ಹರತಾಳು ಹಾಲಪ್ಪ ಮತ್ತು ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೂಡಾ ಇದ್ದರು. ಬಳಿಕ, ಯಡಿಯೂರ‍ಪ್ಪ ಮತ್ತು ಶಿವಕುಮಾರ್‌ ಮಾತ್ರ ಸುಮಾರು 20 ನಿಮಿಷ ಮಾತುಕತೆ ನಡೆಸಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಹೈದರಾಬಾದ್‍ಗೆ ತೆರಳಬೇಕಿದ್ದ ಶಿವಕುಮಾರ್, ಅದನ್ನು ರದ್ದುಪಡಿಸಿ ಯಡಿಯೂರಪ್ಪ ಅವರ ಭೇಟಿಗೆ ಸಮಯ ಮೀಸಲಿಟ್ಟಿದ್ದರು.

ADVERTISEMENT

ಸಭೆಯ ಬಳಿಕ ಜಂಟಿಯಾಗಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಇಬ್ಬರು ನಾಯಕರೂ, ‘ಅಭಿವೃದ್ಧಿ ವಿಷಯದ ಬಗ್ಗೆಯಷ್ಟೇ ಚರ್ಚೆ ಮಾಡಿದ್ದೇವೆ’ ಎಂದಿದ್ದಾರೆ.

‘ನೀರಾವರಿ ಬಿಟ್ಟು ಬೇರೆ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲವೇ’ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ‘ಅದನ್ನೆಲ್ಲ ಮಾಧ್ಯಮದ ಎದುರು ಹೇಳಲು ಸಾಧ್ಯವೇ’ ಎಂದು ಇಬ್ಬರು ನಾಯಕರು ನಗುತ್ತಲೇ ಪ್ರಶ್ನಿಸಿದರು.

ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ನಮ್ಮ ಮನೆಯಲ್ಲಿ ಅಥವಾ ಬೇರೆ ಕಡೆ ಚರ್ಚೆ ನಡೆದರೆ ಅಧಿಕಾರಿಗಳನ್ನು ಕರೆಸಿಕೊಂಡು ಮಾತನಾಡುವುದು ಕಷ್ಟ. ಹೀಗಾಗಿ, ನಾನೇ ಬಂದೆ’ ಎಂದು ಸಮರ್ಥನೆ ನೀಡಿದ್ದಾರೆ. ಈ ಮಾತಿಗೆ ಧ್ವನಿಗೂಡಿಸಿರುವ ಶಿವಕುಮಾರ್, ‘ರಾಜಕೀಯ ಹೊರತಾಗಿಯೂ ವೈಯಕ್ತಿಕವಾಗಿ ನಾವಿಬ್ಬರೂ ಉತ್ತಮ ಸ್ನೇಹಿತರು’ ಎಂದಿದ್ದಾರೆ.

ಬಿಜೆಪಿ ನಾಯಕರಾದ ಪ್ರಭಾಕರ ಕೋರೆ ಅವರು ಇತ್ತೀಚೆಗೆ ನಡೆದ ಕೆಎಲ್‍ಇ ಸುವರ್ಣ ಮಹೋತ್ಸವದಲ್ಲಿ, ‘ಡಿ.ಕೆ. ಶಿವಕುಮಾರ್ ಮುಂದೆ ಮುಖ್ಯಮಂತ್ರಿಯಾಗಲಿದ್ದಾರೆ. ಆದಷ್ಟು ಶೀಘ್ರ ಆ ಕಾಲ ಬರಲಿದೆ’ ಎಂದು ಬಹಿರಂಗವಾಗಿ ಹೇಳಿದ್ದರು. ಆ ಕುರಿತ ಪತ್ರಿಕಾ ವರದಿಯ ತುಣುಕುಗಳನ್ನು ಶಿವಕುಮಾರ್ ಅವರಿಗೆ ಯಡಿಯೂರಪ್ಪ ತೋರಿಸಿದರು ಎಂಬ ವದಂತಿಯೂ ಹಬ್ಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.