ADVERTISEMENT

ವೀರಶೈವರು ನಮ್ಮ ಕೈಬಿಡುವುದಿಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 8:13 IST
Last Updated 24 ನವೆಂಬರ್ 2019, 8:13 IST
   

ಬೆಳಗಾವಿ: 'ಈಗ ನಡೆಯುತ್ತಿರುವ ಉಪ ಚುನಾವಣೆಯೂ ಸೇರಿದಂತೆ ಯಾವುದೇ ಸಂದರ್ಭದಲ್ಲೂ ವೀರಶೈವ ಸಮಾಜದವರು ಯಾವುದೇ ಕಾರಣಕ್ಕೂ ನಮ್ಮ ಕೈ ಬಿಡುವುದಿಲ್ಲ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಉಪಚುನಾವಣೆ ಕಣದಲ್ಲಿರುವ 15 ಅನರ್ಹ ಶಾಸಕರ ಪ್ರಯತ್ನದಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ. ಸಣ್ಣಪುಟ್ಟ ವ್ಯತ್ಯಾಸ ಬದಿಗಿಟ್ಟು 15 ಜನರನ್ನು ವೀರಶೈವ ಸಮುದಾಯವರು ಬೆಂಬಲಿಸಬೇಕು' ಎಂದರು.

ADVERTISEMENT

'ಅಥಣಿ, ಕಾಗವಾಡ, ಗೋಕಾಕದಲ್ಲಿ ನಡೆದ ಪ್ರಚಾರ ಸಭೆಗಳಿಗೆ ನಿರೀಕ್ಷೆಗೂ ಹೆಚ್ಚಿನ ಜನರು ಸೇರಿದ್ದರು. ರಮೇಶ ಜಾರಕಿಹೊಳಿ‌ ಕ್ಷೇತ್ರ ಗೋಕಾಕದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಸಭೆ ಮಾಡಲಾಯಿತು. 15 ಕ್ಷೇತ್ರಗಳಲ್ಲೂ ಗೆಲ್ಲುವ ಸಂಕಲ್ಪ ನಮ್ಮದು. ಅದೇ ವಾತಾವರಣ ಇದೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಏನೇ ಹೇಳಿದರೂ ನಾವು ಎಲ್ಲ ಕಡೆಗಳಲ್ಲೂ ಗೆಲ್ಲುತ್ತೇವೆ' ಎಂದರು.

'ಮುಂದಿನ ಮೂರೂವರೆ ವರ್ಷ ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚಿನ ಗಮನ ಕೊಡುತ್ತೇನೆ' ಎಂದರು.

'ಅಥಣಿ, ಕಾಗವಾಡ, ಗೋಕಾಕದಲ್ಲಿ ಯಾವುದೇ ಬಂಡಾಯ ಇಲ್ಲ' ಎಂದರು.

'ನಮ್ಮದು ಬಿಜೆಪಿ ವಿರುದ್ಧದ ಹೋರಾಟವಲ್ಲ, ರಮೇಶ್ ವಿರುದ್ಧ ಹೋರಾಟ' ಎಂಬ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, 'ಯಾರ ವಿರುದ್ಧದ ಹೋರಾಟ ಎನ್ನುವುದು ಡಿ.9ರಂದು ಫಲಿತಾಂಶ ಬಂದ ಮೇಲೆ ಗೊತ್ತಾಗಲಿದೆ. ಗೋಕಾಕದಲ್ಲಿ ವಿಜಯೋತ್ಸವ ರೀತಿ 35ಸಾವಿರಕ್ಕಿಂತ ಹೆಚ್ಚು ಜನರು ಸೇರಿದ್ದರು. ಮತ್ತೊಮ್ಮೆ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತೇನೆ' ಎಂದರು.

ಶಾಸಕ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡುತ್ತೀರಾ ಎಂಬ ಪ್ರಶ್ನೆಗೆ, 'ಸಚಿವ ಸ್ಥಾನ ಕೊಡದಿದ್ದರೆ ಅವರು ನನ್ನನ್ನು ಬಿಡಬೇಕಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.