ADVERTISEMENT

ಬಿಎಸ್‌ವೈ ವಿರುದ್ಧದ ಭೂ ಹಗರಣ ಪ್ರಕರಣ: ಸುಪ್ರೀಂನಿಂದ ಹೈಕೋರ್ಟ್‌ ಅಂಗಳಕ್ಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 4:56 IST
Last Updated 5 ಡಿಸೆಂಬರ್ 2018, 4:56 IST
   

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿರುದ್ಧದ ಭೂ ಹಗರಣ ಪ್ರಕರಣಗಳ ವಿಚಾರಣೆಯು ಸುಪ್ರೀಂ ಕೋರ್ಟ್‌ ಅಂಗಳದಿಂದ ಹೈಕೋರ್ಟ್‌ ಅಂಗಳಕ್ಕೆ ಮರಳಿದೆ.

ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ 2011ರಲ್ಲಿ ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಲಾಗಿದ್ದ ವಿಶೇಷ ಮೇಲ್ಮನವಿಯನ್ನು ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ ಮಂಗಳವಾರ ಇತ್ಯರ್ಥಪಡಿಸಿತು.

‘ಮೂರು ವರ್ಷಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಸಿರಾಜಿನ್‌ ಬಾಷಾ ಸಲ್ಲಿಸಿರುವ ಈ ಮೇಲ್ಮನವಿಯ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟ ಪೀಠ, ‘ಹೈಕೋರ್ಟ್‌ನಲ್ಲೇ ಪ್ರಕರಣದ ವಿಚಾರಣೆ ಮುಂದುವರಿಯಲಿ’ ಎಂದು ತಿಳಿಸಿತು.

ADVERTISEMENT

‘ಯಡಿಯೂರಪ್ಪ ವಿರುದ್ಧದ ಕೆಲವು ಪ್ರಕರಣಗಳ ವಿಚಾರಣೆಗೆ ಅನುಮತಿ ನಿರಾಕರಿಸಿದ್ದ ರಾಜ್ಯಪಾಲ ವಜುಭಾಯಿ ವಾಲಾ, ಇನ್ನು ಕೆಲವು ಪ್ರಕರಣಗಳ ವಿಚಾರಣೆಗೆ ಸಮ್ಮತಿ ಸೂಚಿಸಿ 2015ರ ಡಿಸೆಂಬರ್‌ 4ರಂದು ಆದೇಶ ಹೊರಡಿಸಿದ್ದರು ಎಂದು ಯಡಿಯೂರಪ್ಪ ಪರ ವಕೀಲ ಮುಕುಲ್‌ ರೋಹಟ್ಗಿ ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನೂ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಲಾದ ರಿಟ್‌ ಅರ್ಜಿಗಳ ವಿಚಾರಣೆಯನ್ನು ಇದೇ ಪೀಠಕ್ಕೆ ವರ್ಗಾಯಿಸುವಂತೆ ಸಿರಾಜಿನ್‌ ಬಾಷಾ ಕೋರಿದ್ದಾರೆ. ಹೈಕೋರ್ಟ್‌ನಲ್ಲೇ ವಿಚಾರಣೆ ಮುಂದುವರಿಯುವುದು ಸೂಕ್ತ ಎಂದರು.

‘ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರದ್ವಾಜ್‌, ಯಡಿಯೂರಪ್ಪ ವಿರುದ್ಧ ಐದು ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡಿದ್ದಕ್ಕೆ ಕಾರಣ ನೀಡಿಲ್ಲ' ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಆದರೆ, ‘ಜನಪ್ರತಿನಿಧಿಗಳ ವಿರುದ್ಧದ ವಿಚಾರಣೆಗೆ ಅನುಮತಿ ನೀಡುವ ಸಂದರ್ಭ ಯಾವುದೇ ಕಾರಣ ನೀಡುವುದು ಕಡ್ಡಾಯವಲ್ಲ’ ಎಂದು ಇದೇ ಕೋರ್ಟ್‌ನ ಅನೇಕ ತೀರ್ಪುಗಳು ಹೇಳಿವೆ ಎಂದು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ದೇವದತ್ತ ಕಾಮತ್‌ ನ್ಯಾಯಪೀಠಕ್ಕೆ ತಿಳಿಸಿದರು.

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ 2011ರ ಜನವರಿ 21ರಂದು ರಾಜ್ಯಪಾಲ ಭಾರದ್ವಾಜ್‌ ಅನುಮತಿ ನೀಡಿದ್ದನ್ನು ರಾಜ್ಯ ಹೈಕೋರ್ಟ್‌ 2015ರ ನವೆಂಬರ್‌ನಲ್ಲಿ ರದ್ದುಪಡಿಸಿ ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ಸಿರಾಜಿನ್‌ ಬಾಷಾ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.

ಒಕ್ಕಲಿಗರ ಸಂಘದ ಅಕ್ರಮ ಆರೋಪ: ತಪ್ಪಿತಸ್ಥರನ್ನು ಜೈಲಿಗೆ ಕಳಿಸಿ–ಹೈಕೋರ್ಟ್‌

‘ಒಕ್ಕಲಿಗರ ಸಂಘದಲ್ಲಿ ಅಕ್ರಮ ಎಸಗುವ ಸದಸ್ಯರು ಮರು ಸ್ಪರ್ಧಿಸದಂತೆ ನಿರ್ಬಂಧ ವಿಧಿಸಬೇಕು ಮತ್ತು ಅಂತಹ ಸದಸ್ಯರ ಆಸ್ತಿ ಜಪ್ತಿ ಮಾಡಿ ಜೈಲಿಗೆ ಕಳುಹಿಸಬೇಕು’ ಎಂದು ಹೈಕೋರ್ಟ್ ಕಿಡಿ ಕಾರಿದೆ.

ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮಧ್ಯಂತರ ಅರ್ಜಿದಾರರ ಪರ ವಕೀಲ ಕೆ.ಎನ್. ಪುಟ್ಟೇಗೌಡ, ‘ಒಕ್ಕಲಿಗರ ಸಂಘದ ಸದಸ್ಯರಿಂದ ಸಾಕಷ್ಟು ಅಕ್ರಮ ನಡೆದಿವೆ. ಈ ಹಿಂದೆ ಪ್ರಕರಣವೊಂದರಲ್ಲಿ ಸಂಘದ ಸದಸ್ಯರಿಗೆ ಇದೇ ಹೈಕೋರ್ಟ್‌ ₹ 3 ಕೋಟಿ ದಂಡ ವಿಧಿಸಿತ್ತು’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ಇಷ್ಟೆಲ್ಲಾ ಅಕ್ರಮಗಳು ನಡೆದಿವೆಯೇ’ ಎಂದು ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಅವರನ್ನು ಪ್ರಶ್ನಿಸಿದರಲ್ಲದೆ, ‘ಇಂತಹವರನ್ನು ಜೈಲಿಗೆ ಕಳುಹಿಸುವ ಕಾನೂನು ರೂಪಿಸಬೇಕು’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.