ADVERTISEMENT

ವಿಧಾನ ಪರಿಷತ್‌ ಸಭಾಪತಿ ಸ್ಥಾನ: ಯಡಿಯೂರಪ್ಪ– ಬಸವರಾಜ ಹೊರಟ್ಟಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 8:50 IST
Last Updated 27 ಜನವರಿ 2021, 8:50 IST
ಯಡಿಯೂರಪ್ಪ– ಬಸವರಾಜ ಹೊರಟ್ಟಿ ಚರ್ಚೆ
ಯಡಿಯೂರಪ್ಪ– ಬಸವರಾಜ ಹೊರಟ್ಟಿ ಚರ್ಚೆ   

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಪೈಪೋಟಿ ನಡೆಯುತ್ತಿರುವ ಮಧ್ಯೆಯೇ, ಸಭಾಪತಿ ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟು ಕೊಡುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಬುಧವಾರ ಮಾತುಕತೆ ನಡೆಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ಮಾತನಾಡಿದ ಹೊರಟ್ಟಿ, ‘ದೇವೇಗೌಡರು ಸೇರಿದಂತೆ ಎಲ್ಲರೂ ಚರ್ಚಿಸಿ ಈ ಬಾರಿ ಸಭಾಪತಿ ಕೇಳೋಣವೆಂದು ಮಾತುಕತೆ ಆಗಿತ್ತು. ಅದೇ ವಿಚಾರವಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡುವಂತೆ ದೇವೇಗೌಡರು ಹೇಳಿದ್ದರು’ ಎಂದರು.

‘ವಿಧಾನ ಪರಿಷತ್‌ ಸದಸ್ಯರ ಸಭೆ ಕರೆದಿದ್ದೇನೆ, ಅವರ ಜೊತೆ ಚರ್ಚಿಸಿ ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ದೇವೇಗೌಡರು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ’ ಎಂದೂ ಹೊರಟ್ಟಿ ತಿಳಿಸಿದರು.

ADVERTISEMENT

‘ಬಯೋಡಾಟಾ ಕಳುಹಿಸಿ ಕೊಡುವಂತೆ ನಡ್ಡಾ ಅವರು ಕೇಳಿದ್ದರು. ಹೀಗಾಗಿ, ಕಳುಹಿಸಲಾಗಿದೆ. ಎಲ್ಲರೂ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಉಪ ಸಭಾಪತಿ ಸ್ಥಾನಕ್ಕೆ ನಾವು ಸ್ಪರ್ಧೆ ಮಾಡುವುದಿಲ್ಲ. ಮುಖ್ಯಮಂತ್ರಿ ಏನು ತೀರ್ಮಾನ ಮಾಡುತ್ತಾರೆ ಎಂದು ಕಾದು ನೋಡಬೇಕು. ಬಿಜೆಪಿಯವರು ಬೆಂಬಲ ನೀಡದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗಿಲ್ಲ. ಕಾಂಗ್ರೆಸ್ ಜೊತೆಗೆ ಹೋಗುವ ಬಗ್ಗೆಯೂ ನಿರ್ಧಾರ ಆಗಿಲ್ಲ’ ಎಂದು ಹೊರಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.