ADVERTISEMENT

ಡಿಕೆಶಿ ಬಿಡುಗಡೆಯಾದರೆ ಎಲ್ಲರಿಗಿಂತ ಹೆಚ್ಚು ಖುಷಿಪಡುತ್ತೇನೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 20:39 IST
Last Updated 3 ಸೆಪ್ಟೆಂಬರ್ 2019, 20:39 IST
   

ಬೆಂಗಳೂರು: ಡಿ.ಕೆ.ಶಿವಕುಮಾರ್ ಬಂಧನದಿಂದ ನಮಗೆ ಸಂತೋಷವಾಗಿಲ್ಲ. ಅವರು ಇದರಿಂದ ಮುಕ್ತರಾಗಿ ಬಂದರೆ ಎಲ್ಲರಿಗಿಂತ ನಾನು ಹೆಚ್ಚು ಸಂತೋಷ ಪಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ಡಿ.ಕೆ ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸುತ್ತಲೇಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ ನಾನು ನನ್ನ ಜೀವನದಲ್ಲಿ ಯಾರಿಗೂ‌ ಕೆಟ್ಟದಾಗಲಿ ಎಂದು ಬಯಸಿಲ್ಲ ಎಂದಿದ್ದಾರೆ. ಅಲ್ಲದೆ, ಕಾನೂನು ತನ್ನದೇ ಆದ‌ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದೂ ಅವರು ಹೇಳಿದ್ದಾರೆ.

ಡಿಕೆಶಿ ಬಂಧನದ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ,‘ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಪ್ರತಿಪಕ್ಷದ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಅಕ್ರಮವಾಗಿ ಬಳಸುತ್ತಿರುವುದು ದೃಢಪಟ್ಟಿದೆ. ಹಬ್ಬದ ಆಚರಣೆಗೂ ಅವಕಾಶ ಸಿಗದೇ 4 ದಿನಗಳ ಕಾಲ ನಿರಂತರ ವಿಚಾರಣೆಗೆ ಒಳಪಟ್ಟ ಡಿ.ಕೆ ಶಿವಕುಮಾರ್‌ ಅವರನ್ನು ‘ವಿಚಾರಣೆಗೆ ಸಹಕರಿಸುತ್ತಿಲ್ಲ’ ಎಂಬ ನೆಪದ ಮೇಲೆ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ,’ಎಂದು ಹೇಳಿದ್ದಾರೆ.

ADVERTISEMENT

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿ, ‘ಸಹದ್ಯೋಗಿ ಡಿ.ಕೆ.ಶಿವಕುಮಾರ್ ಅವರ ಬಂಧನ ಅತ್ಯಂತ ಖಂಡನೀಯ ಕೃತ್ಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿ ಎದುರಿಸಲಾಗದೆ ಅಧಿಕಾರ ದುರುಪಯೋಗದ ಮೂಲಕ ದಮನಿಸುವ ಯತ್ನ ಹೇಡಿತನದ್ದು. ಇಂತಹ ಕಷ್ಟದ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಶಿವಕುಮಾರ್ ಬೆಂಬಲಕ್ಕಿದೆ,’ ಎಂದು ಹೇಳಿದ್ದಾರೆ.

‘ಅಧಿಕಾರ ದುರ್ಬಳಕೆಗೆ ಇದೊಂದು ಸ್ಪಷ್ಟ ನಿದರ್ಶನ,’ ಎಂದು ಮಾಜಿ ಡಿಸಿಎಂ ಪರಮೇಶ್ವರ್‌ ಹೇಳಿದ್ದಾರೆ.

‘ಕೇಂದ್ರದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ. ಡಿಕೆಶಿ ಬೆಂಬಲಕ್ಕೆ ನಾವಿದ್ದೇವೆ,’ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.