ADVERTISEMENT

ಬಿಎಸ್‌ವೈ ವಿಚಾರಣೆಗೆ ಅಸ್ತು: ಇದು ಬಿಜೆಪಿಯ ಭ್ರಷ್ಟಾಚಾರದ ಪರಂಪರೆ ಎಂದ ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಸೆಪ್ಟೆಂಬರ್ 2022, 13:10 IST
Last Updated 8 ಸೆಪ್ಟೆಂಬರ್ 2022, 13:10 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಅನುಷ್ಠಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಲಂಚ ಪಡೆದಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಈ ವಿಚಾರವಾಗಿ ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘40 ಪರ್ಸೆಂಟ್‌ ಬಿಜೆಪಿ ಸರ್ಕಾರದ ಅಕ್ರಮಗಳು ಬೂದಿ ಮುಚ್ಚಿದ ಕೆಂಡವಿದ್ದಂತೆ, ಅದೆಷ್ಟೇ ಬೂದಿಯನ್ನು ಮುಚ್ಚಿದರೂ ಒಳಗೆ ಉರಿಯುತ್ತಲೇ ಇರುತ್ತದೆ, ಬೆಂಕಿ ಹತ್ತಿಕೊಳ್ಳುತ್ತದೆ’ ಎಂದು ಲೇವಡಿ ಮಾಡಿದೆ.

‘ಮುಚ್ಚಿ ಹಾಕಲ್ಪಟ್ಟಿದ್ದ ಬಿಡಿಎ ಹಗರಣದ ವಿಚಾರಣೆಗೆ ಹೈಕೋರ್ಟ್ ಒಪ್ಪಿಗೆ ನೀಡಿದ್ದು ಬಿಜೆಪಿಯ ಭ್ರಷ್ಟಾಚಾರದ ಪರಂಪರೆಗೆ ಹಿಡಿದ ಕನ್ನಡಿ. ಇನ್ನೆಷ್ಟು ಹಗರಣಗಳು ಹೊರಬರಲಿವೆ’ ಎಂದು ಬಿಜೆಪಿ ಸರ್ಕಾರವನ್ನು ಕೆಪಿಸಿಸಿ ಪ್ರಶ್ನಿಸಿದೆ.

ADVERTISEMENT

‘ಬಿಡಿಎ ಗುತ್ತಿಗೆ ಪಡೆಯಲು ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿ ಮತ್ತು ಕೆಲ ಶೆಲ್ ಕಂಪನಿಗಳಿಂದ ಅಂದಿನ‌ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ’ ಎಂದು ಆರೋಪಿಸಿ ಟಿ.ಜೆ ಅಬ್ರಹಾಂ ಖಾಸಗಿ ದೂರು ದಾಖಲಿಸಿದ್ದರು. ‘ವಿಶೇಷ ತನಿಖಾ ತಂಡದಿಂದ(ಎಸ್‌ಐಟಿ) ತನಿಖೆ ನಡೆಸಲು ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಯಡಿಯೂರಪ್ಪ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದ ಕಾರಣ ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ 2021ರ ಜುಲೈ 8 ರಂದು ದೂರನ್ನು ವಜಾಗೊಳಿಸಿತ್ತು.

ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ, ಅಳಿಯ ಸಂಜಯ್ ಶ್ರೀ, ಹಿಂದೆ ಬಿಡಿಎ ಅಧ್ಯಕ್ಷರಾಗಿದ್ದ ಈಗಿನ ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್, ಚಂದ್ರಕಾಂತ್ ರಾಮಲಿಂಗಂ, ಐಎಎಸ್ ಅಧಿಕಾರಿ ಡಾ.ಜಿ.ಸಿ.ಪ್ರಕಾಶ್, ಕೆ.ರವಿ ಮತ್ತು ವಿರೂಪಾಕ್ಷಪ್ಪ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.