ADVERTISEMENT

ನೆರೆ ಸಂತ್ರಸ್ತರಿಗೆ ಕೇಂದ್ರಸರ್ಕಾರದಿಂದ ಬಿಡುಗಡೆಯಾಗದ ಪರಿಹಾರ: ಅಸಹಾಯಕರಾದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 0:52 IST
Last Updated 4 ಅಕ್ಟೋಬರ್ 2019, 0:52 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ನೆರೆಯಿಂದ ಜನರು ತತ್ತರಿಸಿದ್ದರೂ ಈವರೆಗೂ ಪರಿಹಾರ ನೀಡದೆ ಕೇಂದ್ರ ಸರ್ಕಾರ ಸತಾಯಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಅಸಮಾಧಾನ ಹೊರಹಾಕಿದ್ದು, ‘ಸರ್ಕಾರ ಮತ್ತು ಪಕ್ಷದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ’ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನೆರೆ ಪರಿಹಾರ ಬಿಡುಗಡೆ ಆಗದಿರುವ ಬಗ್ಗೆ ಚರ್ಚೆ ನಡೆದಿದೆ. ‘ಒಂದೆರಡು ದಿನಗಳಲ್ಲಿ ನೆರವು ಬರದಿದ್ದರೆ ಜನರಿಗೆ ಏನು ಉತ್ತರ ಕೊಡುವುದು’ ಎಂದು ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

‘ತಕ್ಷಣಕ್ಕೆ ಪರಿಹಾರ ಬಿಡುಗಡೆ ಆಗದಿದ್ದರೆ ಸಂತ್ರಸ್ತರಿಗೆ ಹೇಗೆ ಮುಖ ತೋರಿಸುವುದು. ವಿರೋಧ ಪಕ್ಷಗಳಿಗೆ ಏನು ವಿವರಣೆ ನೀಡುವುದು. ಇಷ್ಟು ದಿನ ಕೆಲವು ಕಾರಣಗಳನ್ನು ಹೇಳಿಕೊಂಡು ಬಂದಿದ್ದೇವೆ. ಇನ್ನು ಮುಂದೆ ಜನರನ್ನು ಸಮಾಧಾನ ಮಾಡುವುದು ಕಷ್ಟಕರವಾಗುತ್ತದೆ. ಸಂತ್ರಸ್ತರಿಗೆ ಮತ್ತೊಮ್ಮೆ ಧೈರ್ಯ ತುಂಬುವ ಸಲುವಾಗಿ ನೆರೆ ಪೀಡಿತ ಪ್ರದೇಶಗಳ ಭೇಟಿಗೆ ತೆರಳುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಹೇಳಿಕೊಂಡರು ಎನ್ನಲಾಗಿದೆ.

ADVERTISEMENT

ಸಭೆಯಲ್ಲಿ ಕೆಲ ಸಚಿವರು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಯಡಿಯೂರಪ್ಪ ಹಾಗೂ ಇತರ ಸಚಿವರು ಧ್ವನಿಗೂಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗುತ್ತದೆ ಎಂದು ಜನರಿಗೆ ಹೇಳಿಕೊಂಡು ಬಂದಿದ್ದೇವೆ. ಈಗ ಎರಡೂ ಕಡೆಯೂ ನಮ್ಮದೇ ಸರ್ಕಾರ ಇದೆ. ಪಕ್ಷದ 25 ಸಂಸದರನ್ನು ಆಯ್ಕೆ ಮಾಡಿದ್ದರೂ ರಾಜ್ಯಕ್ಕೆ ಕೇಂದ್ರ ಪರಿಹಾರ ನೀಡುತ್ತಿಲ್ಲ ಎಂಬ ಭಾವನೆ ಮೂಡಿದೆ. ನೆರೆ ಬಂದು ಎರಡು ತಿಂಗಳಾದರೂ ಕೇಂದ್ರ ತನ್ನ ನಿರ್ಧಾರ ಪ್ರಕಟಿಸಿಲ್ಲ. ಸಾರ್ವಜನಿಕವಾಗಿ ಉತ್ತರ ಕೊಡುವುದು ಕಷ್ಟಕರವಾಗುತ್ತದೆ ಎಂದು ಮುಖ್ಯಮಂತ್ರಿ ಬಳಿ ಸಚಿವರು ಅಲವತ್ತುಕೊಂಡರು ಎನ್ನಲಾಗಿದೆ.

‘ನಿಮ್ಮ ನೋವು ನನಗೂ ಅರ್ಥವಾಗುತ್ತದೆ. ನಾನೂ‌ಇದೇ ನೋವಿನಲ್ಲಿ ಇದ್ದೇನೆ. ಏನು ಮಾಡುವುದು. ಕೇಂದ್ರದ ನಾಯಕರು ಸ್ಪಂದಿಸುತ್ತಿಲ್ಲ. ಪರಿಹಾರ ನೀಡುವ ಬಗ್ಗೆ ಏನೂ ಹೇಳುತ್ತಿಲ್ಲ. ನಾವೂ ಜನರಿಗೆ ಒಂದೆರಡು ದಿನಗಳಲ್ಲಿ ಹಣ ಬಿಡುಗಡೆ ಆಗುತ್ತದೆ ಎಂದು ಹೇಳಿ ಸಾಕಾಗಿದೆ’ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸಾಕಷ್ಟು ಚರ್ಚೆಯ ನಂತರ ಕೊನೆಗೆ ಯಡಿಯೂರಪ್ಪ ಅವರೇ ಸಚಿವರನ್ನು ಸಮಾಧಾನಪಡಿಸಿದ್ದಾರೆ. ಸ್ವಲ್ಪ ಸಮಯ ಕಾದುನೋಡೋಣ. ಅಲ್ಲಿಯವರೆಗೂ ಯಾವುದೇ ಸಚಿವರು ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಬಾರದು. ಗೊಂದಲ ಸೃಷ್ಟಿಸಬಾರದು ಎಂದು ಸಲಹೆ ಮಾಡಿದ್ದಾರೆ.

ಸರ್ಕಾರ– ಪಕ್ಷದ ನಡುವೆ ಮುಸುಕಿನ ಗುದ್ದಾಟವಿದೆ

ಬೆಳಗಾವಿ: ‘ಸರ್ಕಾರ ಮತ್ತು ಪಕ್ಷದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದು ಯಾವ ಪಕ್ಷದಲ್ಲಿ ಎಂದು ನನ್ನಿಂದಲೇ ಹೇಳಿಸಬೇಡಿ’ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಹೇಳಿದರು.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಮನೆಗೆ ಬಂದು ಹೋಗಿದ್ದಾರೆ. ಬಿಬಿಎಂಪಿ ಮೇಯರ್‌ ಆಗಿ ನಮ್ಮವರನ್ನೇ ಆಯ್ಕೆ ಮಾಡಿದ್ದೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಷಯದಲ್ಲಿ ಕಾಂಗ್ರೆಸ್‌ನವರು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಹೇಳಲು ಸಿದ್ಧನಿಲ್ಲ. ವಿರೋಧ ಪಕ್ಷವಾಗಿ ಅವರ ಕೆಲಸ ಮಾಡುತ್ತಾರೆ. ಅದನ್ನು ನಾನು ವಿರೋಧಿಸುವುದಿಲ್ಲ. ಬೇಕಿದ್ದರೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸಲಿ’ ಎಂದರು.

‘ಕೇಂದ್ರವನ್ನು ಕೇಳಲು ಯಡಿಯೂರಪ್ಪಗೆ ತಾಕತ್ತಿಲ್ಲ’ ಎಂಬ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಇದು ತಾಕತ್ತಿನ ಪ್ರಶ್ನೆಯಲ್ಲ. ಶಾಂತವಾಗಿ ಅನುದಾನ ಪಡೆದುಕೊಳ್ಳುಬೇಕಾಗಿದೆ’ ಎಂದರು.

*ನೆರೆ ಪರಿಹಾರದ ಬಗ್ಗೆ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದೆ ಇರುವುದು ಅತ್ಯಂತ ನಾಚಿಕೆಗೇಡಿನ ವಿಚಾರ. ಆ‍ಪರೇಷನ್‌ ಕಮಲಕ್ಕೆ ₹ 50–60 ಕೋಟಿ ಖರ್ಚು ಮಾಡುವವರಿಗೆ ನೆರೆ ಪರಿಹಾರ ನೀಡಲು 60 ದಿನ ಸಾಲದೆ?

- ಕೆಪಿಸಿಸಿ

* ನೆರೆ–ಬರ ಪರಿಹಾರ ಕೇಳುವ ಸಮರ್ಥರು ಬಿಜೆಪಿಯಲ್ಲಿ ಇಲ್ಲ. ಅಧಿಕಾರ ಸಿಗದಿದ್ದರೆ, ಇಷ್ಟು ಹೊತ್ತಿಗಾಗಲೇ ಯಡಿಯೂರಪ್ಪನವರು ಸತ್ತೇ ಹೋಗುತ್ತಿದ್ದರು.

– ಎಸ್‌.ಆರ್‌.ಶ್ರೀನಿವಾಸ್‌, ಗುಬ್ಬಿ ಕ್ಷೇತ್ರದ ಜೆಡಿಎಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.