ಬೆಂಗಳೂರು: ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಹೇಳಬೇಕಾದ ಸಂಗತಿಗಳು ಬಹಳಷ್ಟಿವೆ’ ಎಂದು ಸಂತ್ರಸ್ತ ಬಾಲಕಿಯ ಅಣ್ಣನ ಪರ ವಕೀಲ ಎಸ್.ಬಾಲನ್ ಹೈಕೋರ್ಟ್‌ಗೆ ಅರುಹಿದರು.
ಪ್ರಕರಣ ರದ್ದುಪಡಿಸುವಂತೆ ಕೋರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸೋಮವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಎಸ್.ಬಾಲನ್ ಅವರು, ‘ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಪೂರಕವಾಗಿ ನಾನೂ ಸಾರಾಂಶದ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದೇನೆ. ಈ ವಿಷಯದಲ್ಲಿ ಆರೋಪಿ ಯಡಿಯೂರಪ್ಪನವರಿಗೆ ಸಂಬಂಧಿಸಿದಂತೆ ನ್ಯಾಯಪೀಠಕ್ಕೆ ಬಿನ್ನವಿಸಬೇಕಾದ ಅನೂಹ್ಯ ಸಂಗತಿಗಳು ಅಡಕಗೊಂಡಿವೆ’ ಎಂದರು.
ಇದೇ ವೇಳೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಆದ ಹಿರಿಯ ವಕೀಲ ರವಿವರ್ಮ ಕುಮಾರ್, ‘ಆರೋಪಿ ಯಡಿಯೂರಪ್ಪನವರಿಗೆ ಪೋಕ್ಸೊ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಕ್ಕೆ ವಿನಾಯಿತಿ ನೀಡಿ ಹೈಕೋರ್ಟ್ ಈ ಹಿಂದೆ ಹೊರಡಿಸಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು.
ಆಗ ಮಧ್ಯಪ್ರವೇಶಿಸಿದ, ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಪ್ರಾಸಿಕ್ಯೂಷನ್ ಆಕ್ಷೇಪಣೆಗೆ ನಾನೂ ಎಲ್ಲ ತಯಾರಿ ಮಾಡಿಕೊಂಡೇ ಬಂದಿದ್ದೇನೆ’ ಎಂದು ಕಡತ ಪ್ರದರ್ಶಿಸಲು ಮುಂದಾದರು.
ಕಲಾಪ ಮುಕ್ತಾಯದ ಘಟ್ಟದಲ್ಲಿದ್ದ ಕಾರಣ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ವಿಚಾರಣೆಯನ್ನು ಶುಕ್ರವಾರಕ್ಕೆ (ಡಿ.6) ನಿಗದಿಗೊಳಿಸೋಣ ಮತ್ತು ಎಲ್ಲ ಸಂಗತಿಗಳನ್ನೂ ಆವತ್ತೇ ಕೂಲಂಕಷವಾಗಿ ಪರಿಶೀಲನೆ ಮಾಡೋಣ’ ಎಂದರು.
‘ವಿಶೇಷ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಲಂ 35ರ ಪ್ರಕಾರ ಅಪರಾಧಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ಆರೋಪವನ್ನು ಪರಿಗಣಿಸಿದ ನಂತರ ಒಂದು ತಿಂಗಳ ಅವಧಿಯಲ್ಲಿ ಸಾಕ್ಷಿ ಹಾಗೂ ಆರೋಪಿಯ ಹೇಳಿಕೆ ದಾಖಲಿಸಿಕೊಳ್ಳುವುದು ಕಡ್ಡಾಯ. ಆದರೆ, ಪ್ರಕರಣದಲ್ಲಿ ಆರೋಪ ಪರಿಗಣಿಸಿ ಈಗಾಗಲೇ ಆರು ತಿಂಗಳು ಕಳೆದಿದೆ ಎಂಬ ಪ್ರಾಸಿಕ್ಯೂಷನ್ ಮನವಿಯನ್ನೂ ಮುಂದಿನ ವಿಚಾರಣೆಯಲ್ಲೇ ಆಖೈರುಗೊಳಿಸಲಾಗುವುದು’ ಎಂದು ತಿಳಿಸಿದರು.
‘ಪೊಲೀಸರು ಯಡಿಯೂರಪ್ಪ ಅವರನ್ನು ಬಂಧಿಸಬಾರದು ಮತ್ತು ವಿಚಾರಣೆ ಎದುರಿಸಲು ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿದೆ’ ಎಂಬ ತನ್ನ ಮಧ್ಯಂತರ ಆದೇಶವನ್ನು ಇದೇ 6ರವರೆಗೆ ಪುನಃ ವಿಸ್ತರಿಸಿ ಆದೇಶಿಸಿದರು. ಪ್ರಾಸಿಕ್ಯೂಷನ್ ಪರ ಅಶೋಕ್ ಎನ್.ನಾಯಕ್, ಯಡಿಯೂರಪ್ಪ ಪರ ವಕಾಲತ್ತು ವಹಿಸಿದ್ದ ಸಂದೀಪ್ ಎಸ್.ಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.