
ಬಿ.ಎಸ್. ಯಡಿಯೂರಪ್ಪ
ನವದೆಹಲಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧದ ‘ಪೋಕ್ಸೊ’ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ದೂರಿಗೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಮಧ್ಯಂತರ ಆದೇಶ ನೀಡಿದೆ.
‘ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಹಾಗೂ ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿ. ಏತನ್ಮಧ್ಯೆ, ವಿಚಾರಣಾ ಪ್ರಕ್ರಿಯೆಗಳಿಗೆ ತಡೆ ಮುಂದುವರಿಯುತ್ತದೆ’ ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
‘ಈ ವಿಷಯವನ್ನು ಮತ್ತೆ ಹೈಕೋರ್ಟ್‌ಗೆ ಹಿಂತಿರುಗಿಸಿ, ವಿಚಾರಣೆಗೆ ಒಳಪಡಿಸಬೇಕೇ ಎಂಬುದನ್ನು ಪರಿಶೀಲಿಸುವ ಸೀಮಿತ ಉದ್ದೇಶಕ್ಕಾಗಿ ನೋಟಿಸ್ ನೀಡಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ‘ಹೈಕೋರ್ಟ್ ಪ್ರಮುಖ ಸಾಕ್ಷ್ಯಗಳನ್ನು ನಿರ್ಲಕ್ಷಿಸಿದೆ ಮತ್ತು ಘಟನೆಯ ಸಮಯದಲ್ಲಿ ‘ಅಂತಹದ್ದೇನೂ ಸಂಭವಿಸಿಲ್ಲ’ ಎಂದು ಸೂಚಿಸುವ ಹೇಳಿಕೆಗಳನ್ನು ಪರಿಗಣಿಸಲು ವಿಫಲವಾಗಿದೆ’ ಎಂದು ವಾದಿಸಿದರು.
‘ಹೈಕೋರ್ಟ್ ಸತ್ಯಗಳನ್ನು ನಿರ್ಲಕ್ಷಿಸಿದೆ. ಅರ್ಜಿದಾರರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಈಗ 88 ವರ್ಷ. ರಾಜಕೀಯ ದ್ವೇಷದ ಪ್ರಕರಣದಿಂದ ನಲುಗಿದ್ದಾರೆ’ ಎಂದು ಲೂತ್ರಾ ಹೇಳಿದರು.
‘ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ನನಗೆ ನ್ಯಾಯ ಕೊಡಿಸಿ’ ಎಂದು ಬೇಡಿ ಆರ್‌ಎಂವಿ ಎರಡನೇ ಹಂತದಲ್ಲಿನ ಡಾಲರ್ಸ್ ಕಾಲೊನಿಯಲ್ಲಿರುವ ಯಡಿಯೂರಪ್ಪ ಅವರ ‘ಧವಳಗಿರಿ’ ನಿವಾಸಕ್ಕೆ ತಾಯಿಯೊಬ್ಬರು (ಈಗ ಬದುಕಿಲ್ಲ) ಬಂದಿದ್ದರು.
‘ನನ್ನ 14 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದಾಗಿ ಯಡಿಯೂರಪ್ಪ ತಿಳಿಸಿ ಆಕೆಯನ್ನು ಕೋಣೆಯೊಳಗೆ ಕರೆದುಕೊಂಡು ಹೋಗಿ ಕಾಮಪೀಡಿತ ದುರ್ವರ್ತನೆ ತೋರಿದ್ದಾರೆ. 2024ರ ಫೆಬ್ರುವರಿ 2ರಂದು ಬೆಳಿಗ್ಗೆ 11ರಿಂದ 11.30ರ ನಡುವೆ ಈ ಘಟನೆ ನಡೆದಿದೆ’ ಎಂದು ಆರೋಪಿಸಿ ಬಾಲಕಿಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಹಣ ನೀಡುವ ಮೂಲಕ ಯಡಿಯೂರಪ್ಪ ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದರು’ ಎಂದೂ ಅವರು ಆಪಾದಿಸಿದ್ದರು.
ಇದನ್ನು ಆಧರಿಸಿ, ಪೊಲೀಸರು ‘ಕಾನೂನಿನ ಚೌಕಟ್ಟಿನಲ್ಲಿ ಇದು ಅಪರಾಧ ಎನಿಸಿದೆ’ ಎಂದು ಭಾರತೀಯ ದಂಡ ಸಂಹಿತೆ–1860ರ ಕಲಂ 354 ಎ, 204, 214 ಹಾಗೂ 37 ಮತ್ತು ಪೋಕ್ಸೊ-2012ರ ಕಲಂ 8ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ವಿಚಾರಣಾ ನ್ಯಾಯಾಲಯಕ್ಕೆ ರವಾನಿಸಿದ್ದರು.
ಇದರ ಅನುಸಾರ ‘ಅಪರಾಧ ಜರುಗಿದೆ ಮತ್ತು ಪೊಲೀಸರು ಕ್ರಮ ಜರುಗಿಸಬಹುದಾಗಿದೆ’ ಎಂದು ಪರಿಗಣಿಸಿದ್ದ ವಿಶೇಷ ನ್ಯಾಯಾಲಯ, 2025ರ ಫೆಬ್ರುವರಿ 28ರಂದು ಯಡಿಯೂರಪ್ಪ ಮತ್ತು ಇತರರಿಗೆ ಸಮನ್ಸ್ ಜಾರಿಗೊಳಿಸಿ ಆದೇಶಿಸಿತ್ತು.
ದೂರು ಹಾಗೂ ನ್ಯಾಯಾಲಯದ ಆದೇಶವನ್ನು ಯಡಿಯೂರಪ್ಪ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನವೆಂಬರ್ 11ರಂದು ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.