ADVERTISEMENT

ಇನ್ನು ಎರಡು ವರ್ಷ ನಾನೇ ಸಿಎಂ: ಬಿಎಸ್‌ವೈ

ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: ಸಿದ್ದರಾಮಯ್ಯ ಸವಾಲು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:32 IST
Last Updated 31 ಡಿಸೆಂಬರ್ 2020, 19:32 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ಮುಂದಿನ ಎರಡು ವರ್ಷ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಬಲವಾಗಿ ಪ್ರತಿಪಾದಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇಕಡ 60ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಪ್ರತಿಪಾದಿಸುವುದರ ಜತೆಗೆ, ತಮ್ಮ ನಾಯಕತ್ವ ಬದಲಿಸುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶವನ್ನೂ ಪಕ್ಷದೊಳಗಿನ ರಾಜಕೀಯ ವಿರೋಧಿಗಳಿಗೂ ರವಾನಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಯಡಿಯೂರಪ್ಪ ಹೇಳುತ್ತಿರುವುದು ಸುಳ್ಳು. ಅವರಿಗೆ ಅಷ್ಟು ವಿಶ್ವಾಸವಿದ್ದರೆ, ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ’ ಎಂದು ಸವಾಲು ಹಾಕಿದ್ದಾರೆ.

ADVERTISEMENT

ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವರಾದ ಆರ್. ಅಶೋಕ, ಬಸವರಾಜ ಬೊಮ್ಮಾಯಿ, ಎಸ್. ಸುರೇಶ್ ಕುಮಾರ್ ಅವರೊಂದಿಗೆ ಗುರುವಾರ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ, ‘ರಾಜ್ಯದ 5,728 ಗ್ರಾಮ ಪಂಚಾಯಿತಿಗಳ ಪೈಕಿ 3,800 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಶೇಕಡ 60ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಪಡೆದಿದ್ದಾರೆ’ ಎಂದರು.

‘ನಮ್ಮ ಪಕ್ಷದಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾವ ಗೊಂದಲವೂ ಇಲ್ಲ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ' ಎಂದರು.

‘ಸಚಿವರು, ಪಕ್ಷದ ಶಾಸಕರು ಮತ್ತು ಜನರಲ್ಲಿ ಯಾವ ಗೊಂದಲವೂ ಇಲ್ಲ. ಕೇವಲ ಮಾಧ್ಯಮಗಳಲ್ಲಿ ಮಾತ್ರ ಗೊಂದಲ ಇದೆ. ಇಷ್ಟೊಂದು ಶಾಸಕರು ಜತೆಗಿರುವಾಗ ಒಂದೆರಡು ಶಾಸಕರು ಅಸಮಾಧಾನ ವ್ಯಕ್ತಪಡಿಸಿರಬಹುದು. ಅವರ ಸಮಸ್ಯೆ ಆಲಿಸಲು ವಿಭಾಗವಾರು ಶಾಸಕರ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ’ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕುರ್ಚಿ ಉಳಿಸಿಕೊಳ್ಳಲು ಸುಳ್ಳು’
‘ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಇಂತಹ ಸುಳ್ಳು ಹೇಳುತ್ತಿದ್ದಾರೆ. ಮತ ಎಣಿಕೆಯೇ ಪೂರ್ಣಗೊಂಡಿಲ್ಲ. ಈಗಲೇ ಶೇ 60ರಷ್ಟು ಸ್ಥಾನ ಬಿಜೆಪಿ ಬೆಂಬಲಿತರ ಪಾಲಾಗಿವೆ ಎಂದು ಯಡಿಯೂರಪ್ಪ ಹೇಳಿಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

‘ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷದ ಚಿಹ್ನೆಯ ಮೇಲೆ ನಡೆಯುವುದಿಲ್ಲ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಂದ ಮಾಹಿತಿ ಪಡೆದರೆ ನಮ್ಮ ಪಕ್ಷದ ಬೆಂಬಲಿತ ಸದಸ್ಯರ ಸಂಖ್ಯೆ ತಿಳಿಯುತ್ತದೆ. ಶೇ 65ರಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್‌ನವರೇ ಗೆದ್ದಿದ್ದಾರೆ ಎಂದು ನಾನು ಹೇಳಿದರೆ ಹೇಗಿರುತ್ತದೆ. ಕಾಂಗ್ರೆಸ್‌ ಬೆಂಬಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.