ADVERTISEMENT

ರಾಜ್ಯದಲ್ಲಿ ಹಾಸಿಗೆ ಕೊರತೆಯೇ ಇಲ್ಲ: ಬಿ.ಎಸ್‌.ಯಡಿಯೂರಪ್ಪ

‘ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಆಮ್ಲಜನಕ ಸೌಲಭ್ಯದ 24 ಸಾವಿರ ಹಾಸಿಗೆ ಲಭ್ಯತೆ’

​ಪ್ರಜಾವಾಣಿ ವಾರ್ತೆ
Published 13 ಮೇ 2021, 19:30 IST
Last Updated 13 ಮೇ 2021, 19:30 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ    

ಬೆಂಗಳೂರು: ‘ಕೋವಿಡ್‌ ಎರಡನೇ ಅಲೆ ಎದುರಿಸಲು ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 24 ಸಾವಿರ ಆಮ್ಲಜನಕ ಸೌಲಭ್ಯದ ಹಾಸಿಗೆ, 1,145 ಐಸಿಯು ಹಾಸಿಗೆ, 2059 ವೆಂಟಿಲೇಟರ್ ಸಹಿತ ಹಾಸಿಗೆ, 1,248 ಎಚ್‍ಎಫ್‍ಎನ್‍ಸಿ ಹಾಸಿಗೆ ಲಭ್ಯವಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕಳೆದ ವರ್ಷ ಮಾರ್ಚ್‍ನಲ್ಲಿ ಕೇವಲ 1,970 ಆಮ್ಲಜನಕ ಸೌಲಭ್ಯದ ಹಾಸಿಗೆ, 444 ಐಸಿಯು, 610 ವೆಂಟಿಲೇಟರ್ ಸಹಿತ ಐಸಿಯು ಸೌಲಭ್ಯವಿತ್ತು’ ಎಂದರು.

‘ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಆಮ್ಲಜನಕ ಸೌಲಭ್ಯದ ಹಾಸಿಗೆ, 700ರಿಂದ 9,405ಕ್ಕೆ ಹೆಚ್ಚಿಸಲಾಗಿದೆ. ವೆಂಟೆಲೇಟೆಡ್ ಹಾಸಿಗೆಗಳ ಸಂಖ್ಯೆ 341ರಿಂದ 646ಕ್ಕೆ ಹೆಚ್ಚಿಸಲಾಗಿದೆ. ಎಚ್‍ಎಫ್‍ಎನ್‍ಸಿ ಹಾಸಿಗೆಗಳನ್ನು 15ರಿಂದ 570ಕ್ಕೆ ಹೆಚ್ಚಿಸಲಾಗಿದೆ’ ಎಂದರು.

ADVERTISEMENT

‘ಖಾಸಗಿ ವೈದ್ಯಕೀಯ ಕಾಲೇಜುಗಳು ಆಮ್ಲಜನಕ ಹಾಸಿಗೆ ಹೆಚ್ಚಿಸಲು ಹಾಗೂ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಸರ್ಕಾರ ಶೇ 70ರ ಸಹಾ ಧನ ನೀಡುತ್ತಿದೆ. ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆ ಹೆಚ್ಚಳ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರುಗಳು ಹಾಗೂ ಸಿಲಿಂಡರುಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಆಮ್ಲಜನಕ ಕೊರತೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲೆಗಳಲ್ಲಿರುವ ಆಮ್ಲಜನಕ ಬೇಡಿಕೆ ಪೂರೈಸಲು 10 ಸಾವಿರ ಆಮ್ಲಜನಕ ಸಿಲಿಂಡರ್‌ ಪಡೆಯಲು ತೀರ್ಮಾನಿಸಲಾಗಿದೆ. 15-20 ದಿನಗಳಲ್ಲಿ 730 ಆಮ್ಲಜನಕ ಸಿಲಿಂಡರ್‌ ತರಿಸಿದ್ದೇವೆ. ಕೇಂದ್ರ ಸರ್ಕಾರ 380 ಸಿಲಿಂಡರ್‌ ನೀಡಿದೆ. 350 ವಿದೇಶಗಳಿಂದ ಪಡೆಯಲಾಗಿದೆ’ ಎಂದರು.

‘ಕೋವಿಶೀಲ್ಡ್ ಲಸಿಕೆ ಪಡೆದ 14.87 ಲಕ್ಷ ಫಲಾನುಭವಿಗಳು ಆರು ವಾರ ಪೂರೈಸಿದ್ದು, ಎರಡನೇ ಡೋಸ್‍ಗೆ ಅರ್ಹತೆ ಹೊಂದಿದ್ದಾರೆ. ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ 5.10 ಲಕ್ಷ ಫಲಾನುಭವಿಗಳು ನಾಲ್ಕು ವಾರ ಪೂರೈಸಿದ್ದು, ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿದ್ದಾರೆ. ಲಭ್ಯವಿರುವ ಲಸಿಕೆಯ ದಾಸ್ತಾನನ್ನು ಈ 19.97 ಲಕ್ಷ ಮಂದಿಗೆ ನೀಡಲು ನಿರ್ಧರಿಸಿದ್ದೇವೆ. ಹೀಗಾಗಿ, 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ’ ಎಂದರು.

’ರಾಜ್ಯದಲ್ಲಿ ರೆಮ್‍ಡಿಸಿವಿರ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಇತರ ರಾಜ್ಯಗಳ ಕೋಟಾದಲ್ಲಿ ಬಳಕೆಯಾಗದೆ ಉಳಿದಿರುವುದನ್ನು ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ’ ಎಂದೂ ತಿಳಿಸಿದರು.

‘ಜೀವ ಉಳಿಸುವುದು ಮೊದಲ ಆದ್ಯತೆ’
‘ಸದ್ಯ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಪರಿಹಾರ ಕೊಡುವ ವಿಷಯದಲ್ಲಿ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಸಂಕಷ್ಟದಲ್ಲಿರುವ ಜನರಿಗೆ ರಾಜ್ಯ ಸರ್ಕಾರ ಪ್ಯಾಕೇಜ್‌ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಶ್ರಮಿಕ ವರ್ಗಕ್ಕೆ ತೊಂದರೆ ಆಗಿರುವುದು ಸರಿ. ಹೀಗಾಗಿ, ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಮೇ ಮತ್ತು ಜೂನ್‌ ತಿಂಗಳಿಗೆ ಬಿಪಿಎಲ್‌, ಅಂತ್ಯೋದಯ ಫಲಾನುಭವಿಗೆ ತಲಾ 5 ಕಿಲೋ ಅಕ್ಕಿ ಕೊಡುತ್ತಿದೆ ಎಂದರು.

‘ಚಾಮರಾಜನಗರ ದುರಂತ ವಿಷಯದಲ್ಲಿ ಹೈಕೋರ್ಟ್‌ನಲ್ಲಿ ಇನ್ನೂ ವಿಚಾರಣೆ ನಡೆಯುತ್ತಿರುವುದರಿಂದ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.