ADVERTISEMENT

ಬಿಎಸ್‌ವೈ ‍ಪ್ರಕರಣ ವಿಚಾರಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 19:22 IST
Last Updated 31 ಜನವರಿ 2023, 19:22 IST

ನವದೆಹಲಿ: ಮಾಹಿತಿ ತಂತ್ರಜ್ಞಾನ (ಐ.ಟಿ) ಕಾರಿಡಾರ್‌ ನಿರ್ಮಾಣಕ್ಕಾಗಿ ಬೆಂಗಳೂರಿನ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ 15 ಎಕರೆ 30 ಗುಂಟೆಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ 2 ವಾರ ಮುಂದೂಡಿದೆ.

ವಾದ ಮಂಡಿಸಲು ವಕೀಲರು ಎರಡು ಗಂಟೆಗಳ ಕಾಲಾವಕಾಶ ಕೇಳಿದರು. ಬಳಿಕ ಮುಖ್ಯ ನ್ಯಾ. ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ವಿಚಾರಣೆಯನ್ನು ಮುಂದೂಡಿತು.

ಐ.ಟಿ ಕಾರಿಡಾರ್‌ ನಿರ್ಮಾಣಕ್ಕಾಗಿ ಬೆಳ್ಳಂದೂರು, ದೇವರಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಮತ್ತು ಅಮಾನಿ ಬೆಳ್ಳಂದೂರು ಖಾನೆ ಗ್ರಾಮಗಳಲ್ಲಿ 434 ಎಕರೆ ಜಮೀನು ಸ್ವಾಧೀನಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 2001 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳ 15 ಎಕರೆ 30 ಗುಂಟೆ ಜಮೀನನ್ನು ಆಗಿನ ಉಪ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆದೇಶದಂತೆ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು 2006 ರ ಜೂ. 21ರಂದು ಆದೇಶ ಹೊರಡಿಸಲಾಗಿತ್ತು.

ADVERTISEMENT

ಕೆಐಎಡಿಬಿ ಅಧಿಕಾರಿಗಳ ವಿರೋಧದ ನಡುವೆಯೂ ಈ ಜಮೀನುಗಳನ್ನು ಕಾನೂನುಬಾಹಿರವಾಗಿ ಡಿನೋಟಿಫಿಕೇಷನ್‌ ಮಾಡುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಹಿಂದಿನ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ, ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಹತ್ತು ಮಂದಿಯ ವಿರುದ್ಧ ವಾಸುದೇವ ರೆಡ್ಡಿ ಖಾಸಗಿ ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.