ಬೆಂಗಳೂರು: ‘ಯಡಿಯೂರಪ್ಪ ಅವರು ಲಿಂಗಾಯತರೇ ಅಲ್ಲ. ಅವರು ಬಳೆಗಾರ ಶೆಟ್ಟರು. ಅವರ ಹುಟ್ಟೂರಾದ ಮಂಡ್ಯದ ಬೂಕನಕೆರೆಗೆ ಹೋಗಿ ಕೇಳಿದರೆ, ನಿಜ ಗೊತ್ತಾಗುತ್ತದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲ್ ನಂತರ ಸಮುದಾಯದಲ್ಲಿ ಯಾರೂ ನಾಯಕರು ಇರಲಿಲ್ಲ. ಜನರು ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನು ಒಪ್ಪಿದರು. ಆದರೆ ಅವರು ವೀರಶೈವರು ಮತ್ತು ಪಂಚಮಸಾಲಿಗಳಿಗೆ ಮೀಸಲಾತಿ ನೀಡದೆ, ಮೋಸ ಮಾಡಿದರು’ ಎಂದರು.
‘ಯಡಿಯೂರಪ್ಪ ಲಿಂಗಾಯತರ ಹೆಸರಿನಲ್ಲಿ ಬಿಜೆಪಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಅನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ನಮ್ಮ ಆಕ್ಷೇಪ ಇರುವುದು ಕುಟುಂಬ ರಾಜಕಾರಣದ ಬಗ್ಗೆ ಮಾತ್ರ. ನರೇಂದ್ರ ಮೋದಿ ಸಹ ಕುಟುಂಬ ರಾಜಕಾರಣ ಒಪ್ಪುವುದಿಲ್ಲ’ ಎಂದರು.
ರೇಣುಕಾಚಾರ್ಯ ಅವರು ತಮ್ಮನ್ನು ನಾಯಿ ನರಿ ಎಂದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾಯಿಗಳಿಗೆ ನಿಯತ್ತು ಇದೆ. ಆದರೆ ಹಂದಿಗಳಿಗೆ ನಿಯತ್ತು ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಪರ ರೇಣುಕಾಚಾರ್ಯ ಇಂದು ಮಾತನಾಡುತ್ತಿದ್ದಾರೆ. ಆದರೆ, ಅಂದು ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಗೋವಾಗೆ ಹೋಗಿ ಸಂಚು ಮಾಡಿದ್ದು ಇದೇ ರೇಣುಕಾಚಾರ್ಯ’ ಎಂದರು.
ರಾಜ್ಯ ಘಟಕದ ಅಧ್ಯಕ್ಷ ಯಾರು ಎಂಬುದು ಫೆಬ್ರವರಿ 20ಕ್ಕೆ ಗೊತ್ತಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದರು. ಅವರು ಯಥಾಸ್ಥಿತಿ ಆದೇಶ ಪಡೆದಿದ್ದಾರಷ್ಟೆ. ನಮಗೆ ಫಲ ಸಿಗುತ್ತದೆಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಶಾಸಕ
‘ಯತ್ನಾಳಗೆ ಬುದ್ದಿಭ್ರಮಣೆ ಆಗಿದೆಯಾ’ ‘ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರ ಮಹಾನಾಯಕ. ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಾಯಿ ಉಚ್ಚೆ ಹೊಯ್ದರೆ ಕಲ್ಲಿನ ತೂಕ ಕಡಿಮೆ ಆಗುವುದಿಲ್ಲ’ ಎಂದು ರೇಣುಕಾಚಾರ್ಯ ಕಿಡಿಕಾರಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ಯಡಿಯೂರಪ್ಪ ರಾಜಕಾರಣಕ್ಕೆ ಬಂದು ರಾಜ್ಯದಲ್ಲಿ ಪಕ್ಷ ಕಟ್ಟುವಾಗ ಈ ಬೊಗಳೆ ಮನುಷ್ಯ ಇನ್ನೂ ರಾಜಕಾರಣ ನೋಡಿರಲಿಲ್ಲ. ಈ ಮಂದಿಯ ಜತೆಗೆ ಇರುವುದೇ ಮೂರು ಮತ್ತೊಬ್ಬ ಜನ. ಅವರೇನು ಮಾಡಿಕೊಳ್ಳುತ್ತಾರೆ. ಯತ್ನಾಳಗೆ ಬುದ್ಧಿಭ್ರಮಣೆ ಆಗಿದೆಯಾ? ಹುಚ್ಚಾಸ್ಪತ್ರೆಗೆ ಸೇರಿಸಬೇಕಾ’ ಎಂದು ಪ್ರಶ್ನಿಸಿದರು. ‘ಈ ಮನುಷ್ಯರು ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಅವರ ಷಡ್ಯಂತ್ರವನ್ನು ಸಮಾಜ ಅರ್ಥ ಮಾಡಿಕೊಂಡಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.