ADVERTISEMENT

ಬಿಎಸ್‌ವೈ ಸರ್ವೋಚ್ಛ ನಾಯಕ | ಈಶ್ವರಪ್ಪ ಪತ್ರ ತಲುಪಿಲ್ಲ -ಸಿ.ಟಿ.ರವಿ

ಪಕ್ಷದ ವೇದಿಕೆಯಲ್ಲಿ ಸಮಸ್ಯೆಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 15:31 IST
Last Updated 5 ಏಪ್ರಿಲ್ 2021, 15:31 IST
ಸಿ.ಟಿ. ರವಿ
ಸಿ.ಟಿ. ರವಿ   

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಬರೆದ ಪತ್ರ ನನಗೆ ತಲುಪಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

‘ಈಶ್ವರಪ್ಪ ಅವರು ನನಗೆ ದೂರವಾಣಿ ಕರೆ ಮಾಡಿದ್ದರು. ಆ ವಿಷಯಗಳನ್ನೆಲ್ಲ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಅವರಿಗೆ ಹೇಳಿದ್ದೇನೆ’ ಎಂದು ರವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯಡಿಯೂರಪ್ಪ ನಮ್ಮ ಸರ್ವೋಚ್ಛ ನಾಯಕರು. ಆದರೆ, ಕಾರ್ಯಕರ್ತರು ನಮ್ಮ ಪಕ್ಷದ ಮಾಲೀಕರು. ಕರ್ನಾಟಕದಲ್ಲಿ ಪಕ್ಷದ ಪ್ರಮುಖ ಸಮಿತಿ ಸಭೆ ಮತ್ತು ಕೇಂದ್ರದಲ್ಲಿ ಸಂಸದೀಯ ಮಂಡಳಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇವು ಕುಟುಂಬ ಆಧಾರಿತವಾಗಿಲ್ಲ. ವಂಶ ಪಾರಂಪರ್ಯ ಉತ್ತರಾಧಿಕಾರಿ ಪ್ರವೃತ್ತಿ ನಮ್ಮ ಪಕ್ಷದೊಳಗಿಲ್ಲ’ ಎಂದು ರವಿ ಹೇಳಿದರು.

ADVERTISEMENT

ತಮಿಳುನಾಡಿನಲ್ಲಿ ಯಶಸ್ಸು

ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಅಂಗಪಕ್ಷಗಳು ಅತ್ಯುತ್ತಮ ಫಲಿತಾಂಶ ಪಡೆಯುವ ಸಾಧ್ಯತೆ ಇದೆ. ಬೂತ್‌ ಗೆದ್ದು ಕೊಡಿ, ಅಭ್ಯರ್ಥಿ ಗೆಲ್ಲಿಸಿ ಎಂಬ ಚಿಂತನೆಯೊಂದಿಗೆ ಪಕ್ಷ ತನ್ನನ್ನು ತೊಡಗಿಸಿಕೊಂಡಿತ್ತು. ತಮಿಳು ಅಸ್ಮಿತೆ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಮತದಾರರ ಮುಂದಿಟ್ಟಿದ್ದೇವೆ. ಉತ್ತಮ ಫಲಿತಾಂಶದ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

‘ಚುನಾವಣಾ ಪೂರ್ವದಲ್ಲಿ ನಾವು ವೆಟ್ರಿವೇಲ್‌ ಯಾತ್ರೆ ಕೈಗೊಂಡೆವು, ತಮಿಳುನಾಡಿನ ಆರಾಧ್ಯ ದೈವ ಮುರುಗನ್‌ಗೆ ಅವಹೇಳನ ಮಾಡುವ ಡಿಎಂಕೆ ವಿರುದ್ಧ ಈ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಯಾತ್ರೆಗೆ ಅಭೂತಪೂರ್ವ ಬೆಂಬಲವೂ ಸಿಕ್ಕಿತು. ಯಾತ್ರೆ ಪರಿಣಾಮ ಡಿಎಂಕೆ ತಾನು ಹಿಂದೂ ವಿರೋಧಿ ಅಲ್ಲ ಎಂಬುದನ್ನು ತೋರಿಸಿಕೊಳ್ಳಲು ಮುಂದಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.