ADVERTISEMENT

ಕಬ್ಬು ಸಮಸ್ಯೆ, ಮಹಿಳೆಗೆ ಅವಮಾನ: 21ರಿಂದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 11:09 IST
Last Updated 20 ನವೆಂಬರ್ 2018, 11:09 IST
   

ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ, ಮಹಿಳೆಗೆ ಅವಮಾನ, ರೈತರ ಸಾಲ ಮನ್ನಾ ಗೊಂದಲ ಹಾಗೂ ಬರ ಕಾಮಗಾರಿಗೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಬುಧವಾರದಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆರು ತಿಂಗಳಲ್ಲಿ 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 100 ತಾಲ್ಲೂಕುಗಳು ಬರಪೀಡಿತವಾಗಿವೆ. ಸಾಲ ಮನ್ನಾದ ಚಿಕ್ಕಾಸು ರೈತರಿಗೆ ತಲುಪಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬರೀ ಬುರುಡೆ ಬಿಡುತ್ತಿದ್ದಾರೆ. ರಾಜಕೀಯ ಡೊಂಬರಾಟ ಆಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬೆಳಗಾವಿ ವಿಧಾನಮಂಡಲದ ಅಧಿವೇಶನದ ವೇಳೆ ಲಕ್ಷಾಂತರ ರೈತರನ್ನು ಸೇರಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಚುರುಕು ಮುಟ್ಟಿಸಲಿದ್ದೇವೆ. ಹೆಚ್ಚಿನ ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಬರಪೀಡಿತ ಪ್ರದೇಶಗಳಿಗೂ ಹೋಗುತ್ತಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಈ ಎಲ್ಲ ವಿಚಾರಗಳನ್ನು ಪ್ರಸ್ತಾಪ ಮಾಡಲಿದ್ದೇವೆ’ ಎಂದರು.

ADVERTISEMENT

‘ಕಬ್ಬು ಬೆಳೆಗಾರರಿಗೆ ಮಹಾರಾಷ್ಟ್ರ ಸರ್ಕಾರ ಪ್ರತಿ ಟನ್‌ಗೆ ₹2,900 ಎಫ್‌ಆರ್‌ಪಿ ಬೆಲೆ ಹಾಗೂ ₹200 ಬೆಂಬಲ ಬೆಲೆ ನೀಡುತ್ತಿದೆ. ಗುಜರಾತ್‌ನಲ್ಲಿ ಬೆಳೆಗಾರರಿಗೆ ₹4,000 ದವರೆಗೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸದಾ ಟೀಕೆ ಮಾಡುತ್ತಲೇ ಇರುವ ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಗುಜರಾತ್‌ಗೆ ಹೋಗಿ ವಾಸ್ತವ ಸ್ಥಿತಿ ತಿಳಿದುಕೊಂಡು ಬರಲಿ’ ಎಂದು ಸವಾಲು ಎಸೆದರು.

'ಕುಮಾರಸ್ವಾಮಿ ಅವರನ್ನು ಬೆಳಗಾವಿಯ ಹೋರಾಟಗಾರ್ತಿ ನಾಲಾಯಕ್‌ ಮುಖ್ಯಮಂತ್ರಿ ಎಂದು ಟೀಕಿಸಿದ್ದರಲ್ಲಿ ಏನು ತಪ್ಪಿದೆ. ನಾಲಾಯಕ್‌ ಎಂದರೆ ಕೆಟ್ಟ ಪದ ಅಲ್ಲ. ಅವರು ಮುಖ್ಯಮಂತ್ರಿಯಾಗಲು ಲಾಯಕ್ಕಿಲ್ಲ ಎಂದು ಅರ್ಥ ಎಷ್ಟೇ. ಆ ಮಹಿಳೆಯ ಕ್ಷಮೆ ಕೇಳುವ ಬದಲು ಕುಮಾರಸ್ವಾಮಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ತಜ್ಞರ ಸಮಿತಿ ಸಭೆಯನ್ನೇ ನಡೆಸಿಲ್ಲ: ‘ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಬಿಜೆಪಿ ಸರ್ಕಾರ 2013ರಲ್ಲಿ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಅದರಲ್ಲಿ ಐವರು ರೈತ ಪ್ರತಿನಿಧಿಗಳು ಇದ್ದರು. 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಆ ಸಮಿತಿಯನ್ನು ರದ್ದುಪಡಿಸಿ ತಜ್ಞರ ಸಮಿತಿ ರಚಿಸಿತ್ತು. ಐದು ವರ್ಷಗಳಲ್ಲಿ ಈ ಸಮಿತಿ ಒಂದೇ ಒಂದು ಸಭೆ ನಡೆಸಿಲ್ಲ’ ಎಂದರು.

‘ನಮ್ಮ ಸರ್ಕಾರದ ಅವಧಿಯಲ್ಲೂ ಕಬ್ಬು ಬೆಳೆಗಾರರು ಹೋರಾಟ ನಡೆಸಿದ್ದರು. ಸಚಿವನಾಗಿದ್ದ ನಾನೇ ಅವರಿಗೆ ಬೆಂಬಲ ನೀಡಿದ್ದೆ. ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.