ADVERTISEMENT

'ಬಲ್ಕ್ ಡ್ರಗ್ ಫಾರ್ಮಾ ಪಾರ್ಕ್' ಘೋಷಿಸಲು ಪ್ರಧಾನಿ ಭೇಟಿ: ಸಚಿವ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 13:22 IST
Last Updated 1 ಸೆಪ್ಟೆಂಬರ್ 2020, 13:22 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ರಾಯಚೂರು: ಯಾದಗಿರಿ-ರಾಯಚೂರು ಮಧ್ಯೆ ಭೂಮಿ, ನೀರು ಹಾಗೂ ವಿದ್ಯುತ್ ಲಭ್ಯತೆ ಇರುವುದರಿಂದ 'ಬಲ್ಕ್ ಡ್ರಗ್ ಫಾರ್ಮಾ ಪಾರ್ಕ್' ಸ್ಥಾಪನೆಗೆ ಸೂಕ್ತ ಎಂದು ಗುರುತಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲೆಯ ಭೇಟಿಗೆ ಬಂದಿದ್ದ ಅವರು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಿಧನ ಹಿನ್ನೆಲೆಯಲ್ಲಿ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಹುಬ್ಬಳ್ಳಿಗೆ ಮರಳುವಾಗ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಕಡೇಚೂರು ಕೈಗಾರಿಕೆ ಪ್ರದೇಶದಲ್ಲಿ 2 ಸಾವಿರ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಆಗಿದೆ. ಅಲ್ಲಿ 15 ಔಷಧಿ ಕಂಪೆನಿಗಳು ಬರಲು ಒಪ್ಪಿಕೊಂಡಿವೆ. ಈ ಮೊದಲೇ ಕಂಪೆನಿಗಳಿಗೆ ಅನುಮೋದನೆ ನೀಡಲಾಗಿತ್ತು ಎಂದರು.

ADVERTISEMENT

ಬಲ್ಕ್ ಡ್ರಗ್ ಫಾರ್ಮಾ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿ ಕೇಂದ್ರ ಸಚಿವ ಸದಾನಂದ ಗೌಡರಿಗೆ ಪತ್ರ ಬರೆಯಲಾಗಿದೆ. ಸಂಸದರಾದ ಅಶೋಕ ಗಸ್ತಿ ಹಾಗೂ ರಾಜಾ ಅಮರೇಶ್ವರ ನಾಯಕ ಅವರು ಕೂಡಾ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೂಡಿಕೆದಾರರನ್ನು ಸೆಳೆಯುವುದಕ್ಕಾಗಿ ಕಲಬುರ್ಗಿಯಲ್ಲಿ ಸಮಾವೇಶ ಮಾಡಲು ಯೋಜಿಸಿದ್ದೇವೆ. ಹೂಡಿಕೆದಾರರಿಗೆ ಬೆಂಗಳೂರುವೊಂದೇ ಆಕರ್ಷಕವಾಗಿದೆ. ಉತ್ತರ ಕರ್ನಾಟಕಕ್ಕೂ ಉದ್ಯಮಿಗಳನ್ನು ಕರೆತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.