ADVERTISEMENT

ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ರಾತ್ರಿ ಬಸ್ ಸಂಚಾರ: ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 22 ಮೇ 2020, 4:51 IST
Last Updated 22 ಮೇ 2020, 4:51 IST
   

ಹೊಸಪೇಟೆ: ‘ರಾಜ್ಯದ ಕೆಲವೆಡೆ ಈಗಾಗಲೇ ರಾತ್ರಿ ಬಸ್ ಸಂಚಾರ ಆರಂಭಗೊಂಡಿದೆ. ಶೀಘ್ರದಲ್ಲೇ ರಾಜ್ಯದಾದ್ಯಂತ ಪೂರ್ಣ ಪ್ರಮಾಣದಲ್ಲಿ ರಾತ್ರಿ ವೇಳೆ ಬಸ್‌ಗಳನ್ನು ಓಡಿಸಲಾಗುವುದು’ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಶುಕ್ರವಾರ ಇಲ್ಲಿನ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮೇ 30ರಂದು ಕೇಂದ್ರದ ಹೊಸ ಮಾರ್ಗಸೂಚಿ ಬರಲಿದೆ. ಅದನ್ನು ನೋಡಿಕೊಂಡು ರಾತ್ರಿ ಬಸ್ ಸಂಚಾರಕ್ಕೆ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎನ್ನುವುದರ ಬಗ್ಗೆ ತೀರ್ಮಾನಕ್ಕೆ‌ ಬರಲಾಗುವುದು’ಎಂದು ಹೇಳಿದರು.

ADVERTISEMENT

‘ಆಟೊ ಚಾಲಕರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಕೆಲ ತಾಂತ್ರಿಕ ತೊಂದರೆಗಳಿಂದ ನಿಂತಿತ್ತು. ಈಗ ಅದನ್ನು ಬಗೆಹರಿಸಲಾಗಿದ್ದು, ಎಲ್ಲ ಆಟೊ ಚಾಲಕರಿಗೆ ಯಾವುದೇ ಷರತ್ತಿಲ್ಲದೆ ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡಲಾಗುವುದು’ಎಂದು ಮಾಹಿತಿ ಹಂಚಿಕೊಂಡರು.

‘ಸದ್ಯ ಯಾವ ಸರ್ಕಾರಿ ನೌಕರರಿಗೆ ನಿವೃತ್ತಿ‌ ವೇತನ‌ ಇಲ್ಲ. ಹೀಗಾಗಿ‌ ನಮ್ಮ ಇಲಾಖೆಯಲ್ಲಿ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಇಡೀ ರಾಜ್ಯದಲ್ಲೇ ಹೊಸಪೇಟೆ ವಿಭಾಗ ಅತ್ತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ರಾಜ್ಯದ ಎಲ್ಲ ವಿಭಾಗಗಳು ನಷ್ಟದಲ್ಲಿದ್ದಾಗ ಹೊಸಪೇಟೆ ವಿಭಾಗ ಲಾಭದ ಹಾದಿಯಲ್ಲಿ ನಡೆಯುತ್ತಿದೆ. ಎಲ್ಲ ಅಧಿಕಾರಿಗಳ ಶ್ರಮದಿಂದ ಇದು ಸಾಧ್ಯವಾಗಿದ್ದು ಅವರು ಅಭಿನಂದನಾರ್ಹರು. ಜತೆಗೆ ನನಗೂ ಈ ವಿಭಾಗದ ಮೇಲೆ ಹೆಮ್ಮೆ ಇದೆ’ಎಂದು ಹೇಳಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ, ವಿಭಾಗೀಯ ಸಂಚಾರ ಅಧಿಕಾರಿ ಈಶ್ವರಪ್ಪ ಹೊಸಮನಿ, ಭದ್ರತಾ ಅಧಿಕಾರಿ ರಾಜಶೇಖರ್, ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಅಲ್ತಾಫ್ ಹುಸೇನ್, ಡಿಪೊ ಅಧಿಕಾರಿ ನೀಲಪ್ಪ, ಡಿಪೊ ವ್ಯವಸ್ಥಾಪಕ ಸತ್ಯನಾರಾಯಣಮೂರ್ತಿ ಹಾಗೂ‌ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.