ADVERTISEMENT

ಬಸ್‌ ಸಿಲುಕಿ ಹಂಪಿ ಮಂಟಪಕ್ಕೆ ಧಕ್ಕೆ

ವಿಜಯವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗದ ಮಂಟಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 15:07 IST
Last Updated 25 ಜನವರಿ 2021, 15:07 IST
ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ಮಂಟಪದಲ್ಲಿ ಸೋಮವಾರ ಬಸ್‌ ಸಿಲುಕಿಕೊಂಡಿರುವುದು
ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ಮಂಟಪದಲ್ಲಿ ಸೋಮವಾರ ಬಸ್‌ ಸಿಲುಕಿಕೊಂಡಿರುವುದು   

ಹೊಸಪೇಟೆ: ತಾಲ್ಲೂಕಿನ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ಮಂಟಪದೊಳಗೆ ಸೋಮವಾರ ಮಧ್ಯಾಹ್ನ ಬಸ್‌ ಸಿಲುಕಿ ಮಂಟಪಕ್ಕೆ ಧಕ್ಕೆಯಾಗಿದೆ. ಬಸ್ಸಿನ ಮೇಲ್ಭಾಗಕ್ಕೂ ಹಾನಿಯಾಗಿದೆ. ಕೆಲಹೊತ್ತು ಸಂಚಾರ ಕೂಡ ಅಸ್ತವ್ಯಸ್ತಗೊಂಡಿತ್ತು.

‘ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಪ್ರವಾಸಿಗರಿದ್ದ ಖಾಸಗಿ ಬಸ್ಸೊಂದು ಕಮಲಾಪುರದಿಂದ ಹಂಪಿಯ ವಿಜಯ ವಿಠಲ ದೇವಸ್ಥಾನದ ಕಡೆಗೆ ಹೋಗುವಾಗ ಮಾರ್ಗ ಮಧ್ಯದ ಮಂಟಪದೊಳಗೆ ಸಿಕ್ಕಿ ಬಿದ್ದಿದೆ. ಬಸ್‌ ಹಿಂದೆ, ಮುಂದೆ ಹೋಗಲಿಕ್ಕಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದರಿಂದ ಸುಮಾರು 20 ನಿಮಿಷ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಾಲುದ್ದ ವಾಹನಗಳು ನಿಂತಿದ್ದವು. ಬಳಿಕ ಚಾಲಕ ಏನೂ ತೋಚದೆ ಬಸ್‌ ಓಡಿಸಿಕೊಂಡು ಮುಂದೆ ಹೋಗಿದ್ದರಿಂದ ಅದರ ಮೇಲ್ಭಾಗಕ್ಕೆ ಹಾನಿಯಾಗಿದೆ. ಮೊದಲೇ ಶಿಥಿಲಗೊಂಡಿರುವ ಮಂಟಪಕ್ಕೂ ಧಕ್ಕೆಯಾಗಿದೆ. ಇಷ್ಟಾದರೂ ಪೊಲೀಸರಾಗಲಿ, ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿಯಾಗಲಿ ಆ ಕಡೆ ಸುಳಿಯಲಿಲ್ಲ’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.

ವಿಜಯ ವಿಠಲ ದೇಗುಲಕ್ಕೆ ಹೋಗುವ ಮಾರ್ಗಕ್ಕೆ ಬಸ್‌ಗಳ ಸಂಚಾರಕ್ಕೆ ಅವಕಾಶ ಇಲ್ಲ. ಆದರೆ, ಭದ್ರತಾ ಸಿಬ್ಬಂದಿ ಇರದ ಕಾರಣ ಚಾಲಕ ಬಸ್‌ ಓಡಿಸಿಕೊಂಡು ಬಂದದ್ದರಿಂದ ಮಂಟಪಕ್ಕೆ ಧಕ್ಕೆಯಾಗಿದೆ. ಈ ಕುರಿತು ಸರ್ವೇಕ್ಷಣ ಇಲಾಖೆಯ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರನ್ನು ಸಂಪರ್ಕಿಸಲು ದೂರವಾಣಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.