
ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಎರಡು ವರ್ಷ ಪೂರೈಸಿದ್ದಾರೆ.
ಈ ಸಂಬಂಧ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಬಿಜೆಪಿ ಹಿರಿಯ ನಾಯಕರು ಅವರನ್ನು ಅಭಿನಂದಿಸಿ ಗೌರವಿಸಿದರು.
‘ವಿಜಯೇಂದ್ರ ಅವರು ಎರಡು ವರ್ಷಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ತಳಮಟ್ಟದಿಂದ ಪಕ್ಷದ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ್ದಾರೆ’ ಎಂದು ಪಕ್ಷದ ನಾಯಕರು ಸ್ಮರಿಸಿದರು.
‘ಮೈಸೂರು ಮುಡಾ ಹಗಣದ ಪಾದಯಾತ್ರೆ, ವಾಲ್ಮೀಕಿ ಹಗರಣ ಕುರಿತ ಹೋರಾಟ, ಬೆಲೆ ಏರಿಕೆ ವಿರೋಧಿಸಿ ಅಹೋರಾತ್ರಿ ಧರಣಿ, ಬೆಲೆ ಏರಿಕೆ ವಿರುದ್ಧ ರಾಜ್ಯದಾದ್ಯಂತ ಜನಾಕ್ರೋಶ ಯಾತ್ರೆ, ಕಬ್ಬು ಬೆಳೆಗಾರರ ಹೋರಾಟ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನ ದುರ್ಬಳಕೆ ವಿರುದ್ಧ ಹೋರಾಟವೂ ಸೇರಿ ಹಲವು ಜನಪರ ಹೋರಾಟಗಳ ನೇತೃತ್ವವಹಿಸಿದ್ದರು’ ಎಂದು ಬಿಜೆಪಿ ನಾಯಕರು ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದರಾದ ಬಸವರಾಜ ಬೊಮ್ಮಾಯಿ ಮತ್ತು ಗೋವಿಂದ ಕಾರಜೋಳ, ಪ್ರಮುಖ ನಾಯಕರ ಸಮಿತಿ ಸದಸ್ಯರಾದ ಬಿ.ಶ್ರೀರಾಮುಲು, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತರ ದೊಡ್ಡನಗೌಡ ಪಾಟೀಲ, ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮತ್ತು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.