
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ಮೋದಿ ಅವರು ಉತ್ತರ ನೀಡದೆ ತಪ್ಪಿಸಿಕೊಂಡಿರುವುದು ಸಂಸತ್‌ಗೆ ತೋರಿಸಿರುವ ಅಗೌರವ ಮಾತ್ರವಲ್ಲ, ಸತ್ಯವನ್ನು ಎದುರಿಸಲಾಗದ ಹೇಡಿತನವೂ ಆಗಿದೆ ಎಂದು ಸಿದ್ದರಾಮಯ್ಯ ಹೇಳಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಿರುಗೇಟು ನೀಡಿದ್ದಾರೆ.
ಟ್ವೀಟ್ ವಾರ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ತಿವಿದಿರುವ ವಿಜಯೇಂದ್ರ, ಸಿಎಂ ಅವರೇ, ಪ್ರಧಾನಿ ಅವರು ಎಲ್ಲಿಯೂ ತಪ್ಪಿಸಿಕೊಂಡು ಹೋಗಿರಲಿಲ್ಲ, ಸಂಸತ್ ಭವನದಲ್ಲೇ ಇದ್ದರು. ರಾಜ್ಯ ಸಭೆಯಲ್ಲಿ ನಿಮ್ಮ ಪಕ್ಷ ಹಾಗೂ ವಿರೋಧ ಪಕ್ಷಗಳ ನಡವಳಿಕೆ, ಧೋರಣೆಗಳನ್ನು ಬಯಲಿಗೆಳೆದು ದಿಟ್ಟತನದಿಂದ ಮಾತನಾಡಿದರು. ಲೋಕಸಭೆಯಲ್ಲಿ ನಿಮ್ಮ ಪಕ್ಷದ ಸದಸ್ಯರು ನಡೆಸಿದ ಅಸಂಸದೀಯ ನಡವಳಿಕೆ ಹಾಗೂ ಕುಚೇಷ್ಟಗಳ ಕುರಿತು ಮಾತನಾಡಿದರು. ವಾಸ್ತವವಾಗಿ "ತಪ್ಪಿಸಿಕೊಳ್ಳುವ" ಸಂಸ್ಕೃತಿ ಇದ್ದರೆ ಅದು ನಿಮ್ಮ ಕಾಂಗ್ರೆಸ್‌ನ ನೆಲೆಯಿಂದ ಉದ್ಭವಿಸಿದ್ದು ಎಂದು ತಿರುಗೇಟು ಕೊಟ್ಟಿದ್ದಾರೆ.
ಇದಕ್ಕೆ ಸಾಕ್ಷಿಯಾಗಿ ನಿಮ್ಮ ರಾಹುಲ್ ಗಾಂಧಿ ಅವರೇ ನಮ್ಮ ಕಣ್ಣ ಮುಂದೆ ಇದ್ದಾರೆ. ಕರ್ನಾಟಕದಲ್ಲಿ ನಿಮ್ಮ ಆಡಳಿತದ ಪ್ರತಿಫಲವೆಂಬಂತೆ ಅರಾಜಕತೆ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಪದವಿಯ ಸುತ್ತ ಕಳೆದ ಒಂದು ವರ್ಷದಿಂದಲೂ ದೊಂಬರಾಟ ನಡೆಯುತ್ತಿದೆ. ಇದರ ಪರಿಣಾಮವಾಗಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಭ್ರಷ್ಟಾಚಾರ, ಕಮೀಷನ್ ದಂಧೆ ತಾಂಡವವಾಡುತ್ತಿದೆ. ಜನರ ಗೋಳು ಹೇಳತೀರದಾಗಿದೆ. ಸಮಸ್ಯೆ ಬಗೆಹರಿಸಬೇಕಾದ ನಿಮ್ಮ ಹೈಕಮಾಂಡ್ ರೂವಾರಿ ರಾಹುಲ್ ಗಾಂಧಿಯವರು ಕೈಗೆ ಸಿಗದೇ "ತಪ್ಪಿಸಿಕೊಂಡಿದ್ದಾರೆ". ಅವರನ್ನು ಹುಡುಕಿಕೊಂಡು ಉಪ-ಮುಖ್ಯಮಂತ್ರಿ ಡಿಕೆಶಿ ಅವರು ದಿನ ಬಿಟ್ಟು ದಿನ ದೈನೇಸಿ ಸ್ಥಿತಿಯಲ್ಲಿ ದೆಹಲಿಗೆ ಅಲೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೊದಲು ನೀವು, ಉಪ ಮುಖ್ಯಮಂತ್ರಿ ಸೇರಿ ರಾಹುಲ್ ಗಾಂಧಿಯವರು ಎಲ್ಲಿದ್ದಾರೋ ಹುಡುಕಿಕೊಳ್ಳಿ. CM ಸ್ಥಾನದ ಕಗ್ಗಂಟನ್ನು ಬಿಡಿಸಿಕೊಳ್ಳಿ, ಕರ್ನಾಟಕ ಜನತೆಯ ಶಾಪದಿಂದ ಮುಕ್ತರಾಗಿ. ಇಲ್ಲವಾದರೆ ಅತೀ ಶೀಘ್ರದಲ್ಲೇ ಕರ್ನಾಟಕ ಜನತೆ ನಿಮಗೆ ಮತ್ತು ನಿಮ್ಮ ಕಾಂಗ್ರೆಸ್ ಗೆ ಅಡ್ರೆಸ್ ಸಿಗದ ಪರಿಸ್ಥಿತಿಗೆ ತಳ್ಳಸಿ ಕೊಳ್ಳುವ ಭಾಗ್ಯ ನಿಮಗೆ ಗ್ಯಾರಂಟಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.