ADVERTISEMENT

ಎಲೆಕ್ಟ್ರಾನಿಕ್ಸ್‌ ಬಿಡಿಭಾಗ ಕದಿಯುತ್ತಿದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 16:36 IST
Last Updated 5 ಸೆಪ್ಟೆಂಬರ್ 2021, 16:36 IST
ಆರೋಪಿಯಿಂದ ಜಪ್ತಿ ಮಾಡಿರುವ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳು 
ಆರೋಪಿಯಿಂದ ಜಪ್ತಿ ಮಾಡಿರುವ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳು    

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳನ್ನು ಕದಿಯುತ್ತಿದ್ದ ಆರೋಪಿ ಓಂಕಾರ್‌ (23) ಎಂಬಾತನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು ಆತನದಿಂದ ₹1.50 ಲಕ್ಷ ಮೌಲ್ಯದ ಉಪಕರಣಗಳನ್ನು ವಶ‍ಪಡಿಸಿಕೊಂಡಿದ್ದಾರೆ.

‘ವಿಘ್ನೇಶ್ವರ ನಗರ ಬಸ್‌ ನಿಲ್ದಾಣ ಸಮೀಪ ಇಂಡಸ್‌ ಕಂಪನಿಯ ಟವರ್‌ ಇದೆ. ಅದಕ್ಕೆ ಅಳವಡಿಸಿದ್ದ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸುವ ಕಾರ್ಡ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳು ಕಳವಾಗಿದ್ದವು. ಈ ಸಂಬಂಧ ಆಗಸ್ಟ್‌ 27ರಂದು ದೂರು ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಸಿಬ್ಬಂದಿ ಇದೇ ತಿಂಗಳ 3ರಂದು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಉತ್ತರ ಪ್ರದೇಶದವನಾದ ಆರೋಪಿ ವಿಘ್ನೇಶ್ವರ ನಗರದಲ್ಲಿ ನೆಲೆಸಿದ್ದ. ಇಂಟರ್‌ನೆಟ್‌ ಸೇವೆ ಒದಗಿಸುವ ಕಂಪನಿಯೊಂದರ ಪ್ರತಿನಿಧಿಯಾಗಿದ್ದ ಈತ ಇಂಡಸ್‌ ಕಂಪನಿಯ ಟವರ್‌ ನಿರ್ವಹಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ. ಟವರ್‌ ನಿರ್ವಹಣೆಯ ನೆಪದಲ್ಲಿ ಆಗಾಗ ಸ್ಥಳಕ್ಕೆ ಹೋಗುತ್ತಿದ್ದ ಆತ ದುಬಾರಿ ಮೌಲ್ಯದ ಕಾರ್ಡ್‌ಗಳನ್ನು ಗುರುತಿಸಿ ಅದನ್ನು ಕದಿಯುತ್ತಿದ್ದ. ಅದು ಕಂಪನಿಯ ಗಮನಕ್ಕೂ ಬರುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಗುಜರಿ ಅಂಗಡಿಯೊಂದನ್ನು ನಡೆಸುತ್ತಿದ್ದ ಈತ ಕದ್ದ ಕಾರ್ಡ್‌ಗಳನ್ನು ಚೆನ್ನೈಗೆ ರವಾನೆ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ತನಿಖೆಯನ್ನು ಮುಂದುವರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.