ADVERTISEMENT

ಉಪಚುನಾವಣೆ: ಪೂರ್ಣ ತಣಿಯದ ಬಂಡಾಯ

ಎರಡು ಕಡೆ ಜೆಡಿಎಸ್‌ ಶಸ್ತ್ರತ್ಯಾಗ; ಶರತ್, ಕವಿರಾಜ್ ಉಚ್ಚಾಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:14 IST
Last Updated 1 ಡಿಸೆಂಬರ್ 2019, 13:14 IST
   

ಬೆಂಗಳೂರು: ವಿಧಾನಸಭೆ ಉಪಚುನಾವಣೆಯ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಗುರುವಾರ ಅಥಣಿ, ಹಿರೇಕೆರೂರು ಕ್ಷೇತ್ರಗಳ ಜೆಡಿಎಸ್‌ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದ ಕಾರಣ ಬಿಜೆಪಿ ಅಭ್ಯರ್ಥಿಗಳ ಆತಂಕ ನಿವಾರಣೆಯಾಗಿದೆ. ಹೊಸಕೋಟೆ, ವಿಜಯಪುರ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವುದು ಬಿಜೆಪಿಗೆ ತಲೆನೋವಾಗಿದೆ.

ಪಕ್ಷದ ಸೂಚನೆಗೂ ಬೆಲೆ ಕೊಡದೇ ಕಣದಲ್ಲಿ ಮುಂದುವರಿದ ಕಾರಣ ಹೊಸಕೋಟೆ ಕ್ಷೇತ್ರದ ಬಂಡಾಯ ಅಭ್ಯರ್ಥಿ ಶರತ್‌ ಬಚ್ಚೇಗೌಡ, ವಿಜಯನಗರ ಕ್ಷೇತ್ರದ ಕವಿರಾಜ್‌ ಅರಸ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಉಪಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, 53 ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿರುವುದು ಜೆಡಿಎಸ್ ವರಿಷ್ಠರಿಗೆ ಆಘಾತವುಂಟು ಮಾಡಿದೆ. ಬಿಜೆಪಿಯ ಒತ್ತಡ ತಂತ್ರದಿಂದ ಅಭ್ಯರ್ಥಿಗಳು ಹಿಂದಕ್ಕೆ ಸರಿದಿದ್ದಾರೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ದೂರಿದ್ದಾರೆ.

ADVERTISEMENT

ಅಥಣಿ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಆಪ್ತ ಗುರುಪ್ಪ ದಾಶ್ಯಾಳ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದರು. ಅವರ ಮನವೊಲಿಸಿ ಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡುವಲ್ಲಿ ಸವದಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರಟ್ಟೀಹಳ್ಳಿ ಕಬ್ಬಿಣ ಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರೂ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಆತಂಕ ದೂರವಾಗಿದೆ.

ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ, ಎಸ್‌.ಕೆ.ಬುಟಾಳಿ, ಸುರೇಶ್‌ ಪಾಟೀಲ ಅವರೂ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಇದರಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ಎದುರಾಗಿದ್ದ ತೊಡಕು ನಿವಾರಣೆಯಾಗಿದೆ.

ಸಂಸದ ಬಚ್ಚೇಗೌಡಗೆ ಎಚ್ಚರಿಕೆ

ಸಂಸದ ಬಿ.ಎನ್‌.ಬಚ್ಚೇಗೌಡ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡದೇ ಮಗನ ಪರವಾಗಿ ಕೆಲಸ ಮಾಡಿದರೆ, ಕ್ರಮ ತೆಗೆದುಕೊಳ್ಳುವುದಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದ್ದಾರೆ.

ಬಚ್ಚೇಗೌಡ ಅವರು ಪಕ್ಷದ ನಿಷ್ಠಾವಂತ ನಾಯಕ. ಈವರೆಗೆ ಅವರು ತಮ್ಮ ಪುತ್ರನ ಪರವಾಗಿ ಪ್ರಚಾರ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಮಗನ ಪರ ಅಥವಾ ಎಂ.ಟಿ.ಬಿ.ನಾಗರಾಜ್‌ ವಿರುದ್ಧ ಹೇಳಿಕೆಯನ್ನೂ ನೀಡಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.