ADVERTISEMENT

Live–ಉಪ‌ಚುನಾವಣೆ: ಬೆಳಗಾವಿ ಶೇ 54.03, ಮಸ್ಕಿ ಶೇ 70.48ರಷ್ಟು ಮತದಾನ

ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಜಿದ್ದಾಜಿದ್ದಿನ ಕಣಗಳಾಗಿರುವ ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಿದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೋಂಕು ಹರಡದಂತೆ ಎಚ್ಚರ ವಹಿಸಲು ಮತಗಟ್ಟೆಗಳಲ್ಲಿ ಅಂತರ ಕಾಯ್ದುಕೊಂಡು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಮತದಾನದ ಅವಧಿಯನ್ನು ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಹೆಚ್ಚಿಸಲಾಗಿತ್ತು. ಚುನಾವಣ ಕಣದಲ್ಲಿರುವ ಹಲವು ಅಭ್ಯರ್ಥಿಗಳು ಬೆಳಿಗ್ಗೆಯೇ ಮತದಾನ ನಡೆಸಿದ್ದು, ಮತದಾನ ನಂತರ ಚುರುಕುಗೊಂಡಿತ್ತು.

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 17:11 IST
Last Updated 17 ಏಪ್ರಿಲ್ 2021, 17:11 IST

ಶಾಂತಿಯುತ ಮತದಾನ: ಜನತೆಗೆ ಜಿಲ್ಲಾಧಿಕಾರಿ ಧನ್ಯವಾದ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಶಾಂತಿಯುತ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಹಕರಿಸಿದ ಜಿಲ್ಲೆಯ ಜನತೆ, ಕ್ಷೇತ್ರದ ಮತದಾರರು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಅವರು ಚುನಾವಣಾ ಆಯೋಗದ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಒಟ್ಟಾರೆ ಚುನಾವಣಾ ಪ್ರಕ್ರಿಯೆಯಲ್ಲಿ ನಿರಂತರವಾಗಿ  ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ  ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಮತದಾನ ಮಾಡದ ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ: ಕೋವಿಡ್ - 19 ಸೋಂಕಿತರಾಗಿರುವ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತ ಚಲಾಯಿಸಲಿಲ್ಲ.

ADVERTISEMENT

ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಕನಿಷ್ಠ 80 ಸಾವಿರದಿಂದ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾನು ಭವಿಷ್ಯ ಹೇಳುವುದಿಲ್ಲ. ಕ್ಷೇತ್ರದ ಎಲ್ಲ ಕಡೆಯಿಂದ ಮಾಹಿತಿ ಪಡೆದು ಹೇಳುತ್ತಿದ್ದೇನೆ. ಸತೀಶ ಜಾರಕಿಹೊಳಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಮತದಾನ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಶಾಂತಿಯುತ ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಶಾಂತಿಯುತವಾಗಿ ಶನಿವಾರ ನಡೆದಿದ್ದು, ಶೇ 55.61ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಶೇ 54.03ರಷ್ಟು ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶೇ 54.03ರಷ್ಟು ಮತದಾನವಾಗಿದೆ.

2019ರಲ್ಲಿ ಶೇ 67.31 ಹಾಗೂ 2014ರಲ್ಲಿ ಶೇ 68.25ರಷ್ಟು ಮತದಾನ ಆಗಿತ್ತು.

ಬೆಳಗಾವಿಯಲ್ಲಿ ಶೇ 54.73ರಷ್ಟು ಮತದಾನ

ಬೆಳಗಾವಿಯಲ್ಲಿ ಶೇ 54.73ರಷ್ಟು, ಬಸವ ಕಲ್ಯಾಣ ಶೇ 59.57, ಮಸ್ಕಿಯಲ್ಲಿ ಶೇ 70.48ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮಸ್ಕಿ ಉಪಚುನಾವಣೆ: ಶೇ 70.48 ಮತದಾನ

ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭೆ ಉಪಚುನಾವಣೆಗೆ ಶನಿವಾರ ಒಟ್ಟು ಶೇ 70.48 ರಷ್ಟು ಮತದಾನವಾಗಿದೆ.

ಒಟ್ಟು 2,06,429 ಮತದಾರರ ಪೈಕಿ 1,45,482 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆಯು ಪುರುಷರಗಿಂತಲೂ ಹೆಚ್ಚಿನ ಪ್ರಮಾಣದಲ್ಲಿತ್ತು. ಆದರೆ, ಮತದಾನದಲ್ಲಿ ಹಿಂದೆ ಉಳಿದಿದ್ದಾರೆ.

‌73,311 ಪುರುಷ ಮತದಾರರು ಮತ ಚಲಾಯಿಸಿದ್ದರೆ, 72,169 ಮಹಿಳಾ ಮತದಾರರು ಮತ ನೀಡಿದ್ದಾರೆ. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿತ್ತು.

ಕ್ಷೇತ್ರದಲ್ಲಿ ಹಿಂದೆ ನಡೆದ ವಿಧಾನಸಭೆ ಚುನಾವಣೆಗಳ ಮತದಾನಕ್ಕೆ ಹೋಲಿಸಿದರೆ, ಈ ಬಾರಿ ಅತಿಹೆಚ್ಚು ಮತದಾನವಾಗಿದೆ.

ಆನಂದ ಮಾಮನಿ ಅವರಿಂದ ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸವದತ್ತಿ- ಯಲ್ಲಮ್ಮ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಪಿಪಿಇ ಕಿಟ್ ಧರಿಸಿ ಸವದತ್ತಿಯ ಶಾಸಕರ ಮಾದರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಅವರಿಗೆ ಕೋವಿಡ್- 19 ಶುಕ್ರವಾರ ದೃಢಪಟ್ಟಿತ್ತು.

ಪ್ರತಾಪಗೌಡ ಪಾಟೀಲರಿಂದ ಮತದಾನ

ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಮಸ್ಕಿ ಪಟ್ಟಣದ ಕೇಂದದ್ರ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಅವರಿಗೆ ಕೋವಿಡ್‌ ದೃಢಪಟ್ಟಿದ್ದು, ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಕೋವಿಡ್‌ ಸೋಂಕಿತರಿಗೆ ಸಂಜೆ 6 ಗಂಟೆ ಬಳಿಕ ಮತದಾನಕ್ಕೆ ಅವಕಾಶ ನೀಡಲಾಗಿತ್ತು.

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಸತೀಶ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು ಗೋಕಾಕದ ಜಿ.ಆರ್.ಬಿ.ಸಿ. ಕಾಲೊನಿಯ ಕನ್ನಡ ಸರ್ಕಾರಿಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 162ರಲ್ಲಿ ಶನಿವಾರ ಸಂಜೆ ಮತ ಚಲಾಯಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

‘ಕ್ಷೇತ್ರದಾದ್ಯಂತ ಉತ್ತಮ ಮತದಾನವಾಗುತ್ತಿದೆ. ನನ್ನ ಗೆಲುವು ನಿಶ್ಚಿತ’ ವಿಶ್ವಾಸ ವ್ಯಕ್ತಪಡಿಸಿದರು.

ಮಸ್ಕಿ ಉಪಚುನಾವಣೆ: ಶೇ 62.76 ಮತದಾನ

ರಾಯಚೂರು: ಜಿಲ್ಲೆಯ ಮಸ್ಕಿ‌ ವಿಧಾನಸಭೆ ‌ಶಾಂತಿಯುತವಾಗಿ ಮುಂದುವರಿದಿದ್ದು, ಸಂಜೆ 5 ಗಂಟೆವರೆಗೂ ಶೇ 62.76 ರಷ್ಟು ಮತದಾನವಾಗಿದೆ.

ಬೆಳಗಾವಿಯಲ್ಲಿ ಈವರೆಗೆ ಶೇ 46.70ರಷ್ಟು ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಂಜೆ 5ರವರೆಗೆ ಶೇ 46.70ರಷ್ಟು ಮತದಾನವಾಗಿದೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ 55.11ರಷ್ಟು ಮತದಾನವಾಗಿದೆ. ಸಂಜೆ 7ರವರೆಗೂ ಮತದಾನಕ್ಕೆ ಅವಕಾಶವಿದೆ.

ತಾಂಡಾ ಮತಗಟ್ಟೆಯಲ್ಲಿ ಮತದಾನ 

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬೈಲಹೊಂಗಲ ತಾಲ್ಲೂಕು ಹುಲಿಕೇರಿ ತಾಂಡಾ ಮತಗಟ್ಟೆಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡಿದರು.

ಬೆಳಗಾವಿಯಲ್ಲಿ ಈವರೆಗೆ ಶೇ 37.73ರಷ್ಟು ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಈವರೆಗೆ ಶೇ 37.73ರಷ್ಟು ಮತದಾನವಾಗಿದೆ.

ಮಸ್ಕಿಯಲ್ಲಿ ಶೇ 52.56 ಮತದಾನ

ರಾಯಚೂರು: ಜಿಲ್ಲೆಯ ಮಸ್ಕಿ‌ ವಿಧಾನಸಭೆ ಉಪಚುನಾವಣೆ ‌ಶಾಂತಿಯುತವಾಗಿ ಮುಂದುವರಿದಿದ್ದು, ಮಧ್ಯಾಹ್ನ 3 ಗಂಟೆವರೆಗೂ ಶೇ 52.56 ರಷ್ಟು ಮತದಾನವಾಗಿದೆ.

ಬೆಳಗಾವಿಯಲ್ಲಿ ಶೇ. 35.55ರಷ್ಟು ಮತದಾನ

ಬಿರುಸಿನ ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಾಮದುರ್ಗ ತಾಲೂಕಿನಲ್ಲಿ ತೋರಣಗಟ್ಟಿ ಮತಗಟ್ಟೆಯಲ್ಲಿ ಮತದಾರರು ಬಿಸಿಲಲ್ಲೂ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಬೆಳಗಾವಿಯಲ್ಲಿ ಶೇ. 25.2ರಷ್ಟು ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಈವರೆಗೆ ಶೇ 25.2ರಷ್ಟು ಮತದಾನವಾಗಿದೆ.

ಮಸ್ಕಿ ಉಪಚುನಾವಣೆ: ಶೇ 32.51 ಮತದಾನ

ರಾಯಚೂರು: ಜಿಲ್ಲೆಯ ಮಸ್ಕಿ‌ ವಿಧಾನಸಭೆ ಉಪಚುನಾವಣೆ ‌ಶಾಂತಿಯುತವಾಗಿ ಮುಂದುವರಿದಿದ್ದು, ಮಧ್ಯಾಹ್ನ 1 ಗಂಟೆವರೆಗೂ ಶೇ 32.51 ರಷ್ಟು ಮತದಾನವಾಗಿದೆ.

ಬೆಳಗಾವಿಯಲ್ಲಿ ಶೇ 22.59 ಮತದಾನ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಧ್ಯಾಹ್ನ 1ರವರೆಗೆ ಶೇ 22.59ರಷ್ಟು ಮತದಾನವಾಗಿದೆ.

ಮತದಾನ ಶಾಂತಿಯುತವಾಗಿ ಮುಂದುವರಿದಿದ್ದು, ಬಿರುಬಿಸಿಲಿನಲ್ಲೂ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬರುತ್ತಿರುವುದು ಅಲ್ಲಲ್ಲಿ ಕಂಡುಬಂತು‌‌.

ರಮೇಶ ಜಾರಕಿಹೊಳಿ ಪತ್ನಿ ಮತದಾನ

ಬೆಳಗಾವಿ: ಗೋಕಾಕ ಬಿಜೆಪಿ ‌ಶಾಸಕ ರಮೇಶ ಜಾರಕಿಹೊಳಿ ಅವರ ಪತ್ನಿ ಜಯಶ್ರೀ ಮತದಾನ ಮಾಡಿದರು.

ಗೋಕಾಕ ನಗರದ ನ್ಯೂ ಇಂಗ್ಲಿಷ್ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಹಕ್ಕು ಚಲಾಯಿಸಿದರು.

ರಮೇಶ ಜಾರಕಿಹೊಳಿ ಅವರು ಕೋವಿಡ್ ಕಾರಣದಿಂದಾಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ಚುನಾವಣಾ ಆಯೋಗ ಕಲ್ಪಿಸಿರುವ ಅವಕಾಶ ಬಳಸಿಕೊಂಡು ಎರಡು ದಿನಗಳ ಹಿಂದೆಯೇ ಅಂಚೆ ಮತಪತ್ರದ ಮೂಲಕ ಮತ ಹಕ್ಕು ಚಲಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ರಮೇಶ ಜಾರಕಿಹೊಳಿ ಪುತ್ರ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರಿಗೆ ಕೋವಿಡ್- 19 ದೃಢಪಟ್ಟಿದೆ.

ಕುರಕುಂದಿ ಮತಗಟ್ಟೆ: ಪೊಲೀಸರ ವಿರುದ್ಧ ಆಕ್ರೋಶ

ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಿಂಧನೂರು ತಾಲ್ಲೂಕಿನ ಕುರಕುಂದಿ ಗ್ರಾಮದ ಮತಗಟ್ಟೆ ಹತ್ತಿರ ಕಾಂಗ್ರೆಸ್ ಬೆಂಬಲಿಗರು ಪೊಲೀಸರ‌ ವಿರುದ್ಧ ಆಕ್ರೋಶ ‌ವ್ಯಕ್ತಪಡಿಸಿದರು.

'ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಕ್ಷದವರನ್ನು‌‌ ಬಿಡಬಾರದು ಎನ್ನುವ ನಿಯಮವನ್ನು ಪೊಲೀಸರು ಸರಿಯಾಗಿ ನೋಡುತ್ತಿಲ್ಲ. ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ‌ಬೆಂಬಲಿಗ ಪದ್ಮಾವತಿ ಅವರು ಏರುದನಿಯಲ್ಲಿ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡರು.

'ಕಾಂಗ್ರೆಸ್ ‌ನವರ ಕೊರಳ ಪಟ್ಟಿ ಹಿಡಿದು ತಳ್ಳಿದ ಪೊಲೀಸರು, ಬಿಜೆಪಿಯವರು 100 ಮೀಟರ್ ‌ವ್ಯಾಪ್ತಿಯಲ್ಲೇ ನಿಂತಿದ್ದರೂ ಕೇಳುತ್ತಿಲ್ಲ' ಎಂದು ಆರೋಪಿಸಿದರು.

ಗೋಕಾಕ: ಬಿಸಿಲಿನಲ್ಲೇ ಸರದಿಯಲ್ಲಿ ನಿಂತ ಮತದಾರ

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗೋಕಾಕ ತಾಲ್ಲೂಕಿನ ಮಲ್ಲಾಪೂರ ಪಿ.ಜಿ. ಗ್ರಾಮದಲ್ಲಿ ಮತದಾರರು ಬಿಸಿಲಿನಲ್ಲೇ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಬೆಳಗಾವಿ: ಶೇ 13.13ರಷ್ಟು ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ‌ ಚುನಾವಣೆಯಲ್ಲಿ ಈವರೆಗೆ ಶೇ 13.13ರಷ್ಟು ಮತದಾನವಾಗಿದೆ.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ‌ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮೂಡಲಗಿ ತಾಲ್ಲೂಕಿನ ‌ಕಲ್ಲೋಳಿಯಲ್ಲಿ ಮತದಾನ ಮಾಡಿದರು.

ಮಸ್ಕಿ ಉಪಚುನಾವಣೆ: ಶೇ 19.30 ಮತದಾನ

ರಾಯಚೂರು: ಮಸ್ಕಿ ಉಪಚುನಾವಣೆಗೆ ಮತದಾನ ಬಿರುಸಿನಿಂದ‌ ನಡೆದಿದ್ದು, 11 ಗಂಟೆವರೆಗೂ ಶೇ 19.30 ಮತದಾನವಾಗಿದೆ. ಒಟ್ಟು 2,06,429 ಮತದಾರರ ಪೈಕಿ 23,518 ಪುರುಷ ಮತದಾರರು ಮತ್ತು 16,322 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ಮಸ್ಕಿ: ಕೋವಿಡ್ ಸೋಂಕಿತರಿಗೆ 6ರ ನಂತರ ಮತದಾನಕ್ಕೆ ವ್ಯವಸ್ಥೆ

ಮಸ್ಕಿ (ರಾಯಚೂರು): ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 7 ಜನ ಕೋವಿಡ್ ಸೋಂಕಿತರಿದ್ದು, ಸಂಜೆ 6ರ ನಂತರ ಮತದಾನ ಮಾಡಲು ಎಲ್ಲರಿಗೂ ಮಾಹಿತಿ ನೀಡಲಾಗಿದೆ. ಮತಗಟ್ಟೆ‌ ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ಬೆಳಗಾವಿ: ಶೇ 12.29ರಷ್ಟು ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬೆಳಿಗ್ಗೆ 11ರ ವೇಳೆಗೆ ಶೇ 12.29ರಷ್ಟು ಮತದಾನವಾಗಿದೆ.

ಕ್ಷೇತ್ರದಾದ್ಯಂತ ಮತದಾನ ಶಾಂತಿಯುತವಾಗಿ ನಡೆದಿದೆ. ಮತದಾರರು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದರು. ಕೆಲವು ಹಳ್ಳಿಗಳಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ಕೆಲವೆಡೆ ನೀರಸವಾಗಿ ನಡೆಯುತ್ತಿದೆ. ಈವರೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ 19.48ರಷ್ಟು ಮತದಾನವಾಗಿದೆ. ಗೋಕಾಕ (ಶೇ 17.61) ಕ್ಷೇತ್ರ ನಂತರದ ಸ್ಥಾನದಲ್ಲಿದೆ.

ಕ್ಷೇತ್ರದಲ್ಲಿ ಬೆಳಿಗ್ಗೆ 9ರ ವೇಳೆಗೆ ಶೇ 5.7ರಷ್ಟು ಮತದಾನವಾಗಿತ್ತು. ಬಳಿಕ ಚುರುಕುಗೊಂಡಿದೆ.

ಬೆಳಗಾವಿ: ಚುನಾವಣಾ ಏಜೆಂಟ್ ಕಾರ್ಯಕ್ಕೆ ಅಡ್ಡಿ ಆರೋಪ

ಬೆಳಗಾವಿ: ಇಲ್ಲಿನ ಖಡಕ್‌ ಗಲ್ಲಿ ಕಾರ್ನರ್‌ನಲ್ಲಿರುವ ಉರ್ದು ಶಾಲೆಯ ಮತಗಟ್ಟೆ‌ ಬಳಿ ಬಿಜೆಪಿ ಚುನಾವಣಾ ಏಜೆಂಟ್‌ಗೆ ಅಲ್ಲಿನ ಸಿಬ್ಬಂದಿ ಅಡ್ಡಿಪಡಿಸಿದರು ಎಂದು ಆರೋಪಿಸಲಾಗಿದೆ.

ಮತಗಟ್ಟೆಗೆ ಭೇಟಿ ನೀಡಿದ್ದ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಏಜೆಂಟ್ ಹಾಗೂ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗೊಂದಲಕ್ಕೆ ಅವಕಾಶ ಕೊಡದಂತೆ ಕಾರ್ಯನಿರ್ವಹಣೆ ಮಾಡುವಂತೆ ಕೋರಿದರು.

ಬೆಳಗಾವಿ: ಸಖಿ ಮತಗಟ್ಟೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಂಗವಾಗಿ ತಾಲ್ಲೂಕಿನ ಮೋದಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ.

ಬೆಳಗಾವಿ: ಅಂಕಲಗಿಯಲ್ಲಿ ಸೂಕ್ಷ್ಮ ಮತಗಟ್ಟೆಯಲ್ಲಿ ಸಿಐಎಸ್ಎಫ್ ಭದ್ರತೆ

ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾಗೂ ಸೂಕ್ಷ್ಮ ಮತಗಟ್ಟೆಯಾಗಿರುವ ಗೋಕಾಕ ತಾಲ್ಲೂಕಿನ ಅಂಕಲಗಿಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಲಾಗುತ್ತಿದೆ.

ಮಸ್ಕಿ: ಹರ್ವಾಪುರ ಮತಗಟ್ಟೆಗೆ ಭಾರಿ ಭದ್ರತೆ

ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭೆ ಕ್ಷೇತ್ರ ‌ವ್ಯಾಪ್ತಿಯಲ್ಲಿ ಹಣ ಹಂಚಿಕೆ ವಿಡಿಯೋ ವೈರಲ್‌ ಆಗಿದ್ದ ಹರ್ವಾಪುರ ಗ್ರಾಮದ ಎರಡೂ ಮತಗಟ್ಟೆಗಳಿಗೆ‌ ಭಾರಿ‌ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ಸಿಆರ್‌ಪಿಎಫ್ ಹಾಗೂ ಮಹಿಳಾ ಅರೆಸೇನಾ ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ.

ಹಿರೇತಡಸಿ, ಚಿಕ್ಕತಡಸಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಬೆಳಗಾವಿ: ಪ್ರವಾಹಪೀಡಿತ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು. ಬೇಡಿಕೆ ಈಡೇರುವವರೆಗೆ ಮತದಾನ ಮಾಡುವುದಿಲ್ಲ ಎಂದು ಒತ್ತಾಯಿಸಿ  ರಾಮದುರ್ಗ ತಾಲ್ಲೂಕಿನ ಹಿರೇತಡಸಿ, ಚಿಕ್ಕತಡಸಿ ಗ್ರಾಮಸ್ಥರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಬಹಿಷ್ಕಾರ ಹಾಕಿದ್ದಾರೆ.

ಬೆಳಗಾವಿ: ಟವೆಲ್, ಸೆರಗೇ ಇಲ್ಲಿ ಮಾಸ್ಕ್

ಬೆಳಗಾವಿ: ಕೋವಿಡ್- 19 ಎರಡನೇ ಅಲೆಯ ಆತಂಕ ಕಾಡುತ್ತಿರುವ ಈ ಸಂದರ್ಭದಲ್ಲೂ ಗ್ರಾಮೀಣ ಜನರು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ತಾಲ್ಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದಾಗ, ಮತದಾರರು ಮತಗಟ್ಟೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸದಿರುವುದು‌ ಕಂಡು ಬಂತು.

ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಮಹಾಂತೇಶ ನಗರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬೆಳಗಾವಿ: ಶೇ 5.7ರಷ್ಟು ಮತದಾನ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ನೀರಸವಾಗಿ ನಡೆದಿದೆ. ಬೆಳಿಗ್ಗೆ 9ರವರೆಗೆ ಶೇ 5.7ರಷ್ಟು ಮತದಾನವಾಗಿದೆ.

ಒಟ್ಟು 18.13 ಲಕ್ಷ ಮತದಾರರಲ್ಲಿ ಈವರೆಗೆ 99285 ಮಂದಿಯಷ್ಟೆ ಮತ ಹಕ್ಕು ಚಲಾಯಿಸಿದ್ದಾರೆ.

ಮಸ್ಕಿ ಉಪಚುನಾವಣೆ: ಶೇ 11.23 ಮತದಾನ

ರಾಯಚೂರು: ಜಿಲ್ಲೆಯ ಮಸ್ಕಿ‌ ವಿಧಾನಸಭೆ ಉಪಚುನಾವಣೆ ‌ಶಾಂತಿಯುತವಾಗಿ ಮುಂದುವರಿದಿದ್ದು, ಬೆಳಿಗ್ಗೆ 9 ಗಂಟೆವರೆಗೂ ಶೇ 11.23 ರಷ್ಟು ಮತದಾನವಾಗಿದೆ.

ಮಹಿಳೆಯರಿಗಾಗಿ 'ಸಖಿ ಮತಗಟ್ಟೆ'

ಸಖಿ ಮತಗಟ್ಟೆ: ಮಸ್ಕಿ ವಿಧಾನಸಭ ಕ್ಷೇತ್ರಗಳ್ಲಲಿ ಮಹಿಳಾ ಮತದಾರರು ಹೆಚ್ಚಿರುವ ಎರಡು ಕಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಸ್ಕಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಮತಗಟ್ಟೆಯನ್ನು ಗುಲಾಬಿ ವರ್ಣದಲ್ಲಿ ಮುಳುಗಿಸಲಾಗಿದೆ. ‘ಪಿಂಕ್‌ ಬೂತ್‌’ ಹೆಸರಿಗೆ ತಕ್ಕಂತೆ ಗುಲಾಬಿ ವರ್ಣವೈವಿಧ್ಯದಲ್ಲಿ ಅಲಂಕಾರ ಮಾಡಲಾಗಿದೆ.

ತುರ್ವಿಹಾಳದ ಗ್ರಾಮ ಪಂಚಾಯಿತಿ ಕಟ್ಟಡದ ಮತಗಟ್ಟೆ ಕೂಡಾ ಸಖಿ ಮತಗಟ್ಟೆಯಾಗಿದ್ದು, ಅದನ್ನು ಅಲಂಕೃತಗೊಳಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಸುವ ಎಲ್ಲ ಸಿಬ್ಬಂದಿಯು ಮಹಿಳೆಯರೆ ಆಗಿರುವುದು ವಿಶೇಷ.

ಮಸ್ಕಿ ಪಟ್ಟಣದ ಸಖಿ ಮತಗಟ್ಟೆಯಲ್ಲಿ ಮತದಾನಕ್ಕೆ ಬಂದಿರುವ ಮತದಾರರು

ರಮೇಶ, ಲಕ್ಷ್ಮಿ, ಮಾಮನಿ ಮತದಾನ ಮಾಡುವರೇ?

ಬೆಳಗಾವಿ: ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾನ ಮಾಡುವರೋ‌, ಇಲ್ಲವೋ ಎನ್ನುವ ಕುತೂಹಲ ಮೂಡಿದೆ.

ಸಿ.ಡಿ. ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅವರು, ಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ನಡುವೆ ಅವರಿಗೆ ಕೋವಿಡ್- 19 ದೃಢಪಟ್ಟಿತ್ತು. ಗ್ರಾಮೀಣ ಕ್ಷೇತ್ರದ ಶಾಸಕಿ, ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೂ‌ ಕೋವಿಡ್ ದೃಢಪಟ್ಟಿದೆ. ಸವದತ್ತಿ- ಯಲ್ಲಮ್ಮ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರಿಗೂ ಕೋವಿಡ್ ದೃಢಪಟ್ಟಿದೆ.

ಬಸವಕಲ್ಯಾಣ ತ್ರಿಪುರಾಂತದ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತ ಮತದಾರರು

ಬೆಳಗಾವಿ ಲೋಕಸಭಾ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ನೀರಸ ಮತದಾನ

ಬೆಳಗಾವಿ: ಶಾಸಕ ಅಭಯ ಪಾಟೀಲ ಮತದಾನ

ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಪತ್ನಿ ಪ್ರೀತಿ ಪಾಟೀಲ ಅವರೊಂದಿಗೆ ಹೊಸೂರ ಬಸವನ ಗಲ್ಲಿಯಲ್ಲಿರುವ ಮರಾಠಿ ಶಾಲೆಯ ಮತಗಟ್ಟೆ ಸಂಖ್ಯೆ 214ರಲ್ಲಿ ಮತ ಚಲಾಯಿಸಿದರು.

ಬಳಿಕ ಶಾಸಕರು, ಮತದಾರರ ಕ್ರಮ ಸಂಖ್ಯೆ, ಕೊಠಡಿ ಸಂಖ್ಯೆ ಸ್ಲಿಪ್‌ಗಳನ್ನು ನೀಡುವ ಮೂಲಕ ಕಾರ್ಯಕರ್ತರೊಂದಿಗೆ ಮತದಾನ ಮಾಡುವಂತೆ ಕೋರಿದರು.

ಮಸ್ಕಿ: ಅತಿಸೂಕ್ಷ್ಮ ಮತಗಟ್ಟೆಗೆ ಹೆಚ್ಚಿನ‌ ಭದ್ರತೆ

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 5ಎ ಕಾಲುವೆಗಾಗಿ ಹೋರಾಟ ನಡೆಸಿರುವ ನಾಲ್ಕು ಗ್ರಾಮ ಪಂಚಾಯಿತಿಗಳ‌ ಭಾಗದ ಮತಗಟ್ಟೆಗಳಿಗೆ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ.

ವಟಗಲ್ ಸೇರಿದಂತೆ ಏಳು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಸಿಆರ್‌ಪಿಎಫ್ ತಂಡದವರನ್ನು ನಿಯೋಜಿಸಲಾಗಿದೆ. ಜೊತೆಗೆ ಪೊಲೀಸರು ಇದ್ದಾರೆ.

ಬೆಳಗಾವಿ: 2566 ಮತಗಟ್ಟೆಗಳಲ್ಲಿ ಮತದಾನ

ಕೇಂದ್ರದಲ್ಲಿ ಸಚಿವರಾಗಿದ್ದ ಸುರೇಶ ಅಂಗಡಿ ಕೋವಿಡ್-19ನಿಂದ ಮೃತರಾದ್ದರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಣದಲ್ಲಿರುವ ಬಿಜೆಪಿಯ ಮಂಗಲಾ ಸುರೇಶ ಅಂಗಡಿ, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಸೇರಿದಂತೆ 10 ಮಂದಿ ಕಣದಲ್ಲಿದ್ದಾರೆ. ಅವರ‌ ಭವಿಷ್ಯ ಬರೆಯಲು ಮತದಾರರು ಸಜ್ಜಾಗಿದ್ದಾರೆ.

ಎಲ್ಲ ಮತಗಟ್ಟೆಗಳಲ್ಲೂ ಬೆಳಿಗ್ಗೆ 6.30ಕ್ಕೆ ಅಣಕು ಮತದಾನ ಪ್ರಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್-19 ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. 2566 ಮತಗಟ್ಟೆಗಳಲ್ಲಿ ಮತದಾನ ಆರಂಭಗೊಂಡಿದೆ. 18.13 ಲಕ್ಷ ಮತದಾರರು ಇದ್ದಾರೆ ಎಂದು ತಿಳಿಸಿದ್ದಾರೆ.

ಮಸ್ಕಿ: ಮತದಾನ ಮಾಡಿದ ಕಾಂಗ್ರೆಸ್ ‌ಅಭ್ಯರ್ಥಿ

ರಾಯಚೂರು: ಮಸ್ಕಿ ವಿಧಾನಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರ್ವಿಹಾಳ ಮತದಾನ ಮಾಡಿದರು. ಕ್ಷೇತ್ರ ‌ವ್ಯಾಪ್ತಿಯಲ್ಲಿರುವ ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ಗೆಲುವಿನ‌ ಚಿಹ್ನೆ ತೋರಿಸಿದರು.

ಪಶ್ಚಿಮ ಬಂಗಾಳ ವಿಧಾನಸಭೆ: 5ನೇ ಹಂತದ ಮತದಾನ ಇಂದು

ಮಸ್ಕಿ: ಪ್ರತಾಪಗೌಡ ಕುಟುಂಬದವರಿಂದ‌ ಮತದಾನ

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ‌ ಅವರ ಕುಟುಂಬದ ಸದಸ್ಯರೆಲ್ಲ ಮಸ್ಕಿ ಪಟ್ಟಣದ ಕೇಂದ್ರ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಪ್ರತಾಪಗೌಡ ಪಾಟೀಲ ಅವರಿಗೆ ಕೋವಿಡ್ ದೃಢಪಟ್ಟಿರುವುದರಿಂದ ಅವರು ಪ್ರತ್ಯೇಕವಾಗಿ ಮನೆಯಲ್ಲೇ ಉಳಿದಿದ್ದಾರೆ. ಸಂಜೆ 6ರ ನಂತರ ಮತದಾನ ಮಾಡಲಿದ್ದಾರೆ.

ಬೆಳಗಾವಿ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮಂಗಲಾ ಅಂಗಡಿ

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ನಗರದ ಸದಾಶಿವ ನಗರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಅವರೊಂದಿಗೆ ಪುತ್ರಿಯರಾದ ಶ್ರದ್ಧಾ ಅಂಗಡಿ ಹಾಗೂ ಡಾ.ಸ್ಫೂರ್ತಿ ಪಾಟೀಲ ಬಂದಿದ್ದರು.

ಬಳಿಕ ಮಾತನಾಡಿದ ಮಂಗಲಾ,  ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಬಂದು ನನ್ನ ಪರವಾಗಿ ಪ್ರಚಾರ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಬಹಳ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಬಿಜೆಪಿಯೇ ಗೆಲ್ಲುತ್ತದೆ ಎಂಬ‌ ವಿಶ್ವಾಸ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.