ADVERTISEMENT

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿಗೆ ಲುಕ್‌ಔಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 15:40 IST
Last Updated 11 ಫೆಬ್ರುವರಿ 2026, 15:40 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ಬೆಂಗಳೂರು: ರೌಡಿ ಶೀಟರ್‌ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ ಬೆನ್ನಲ್ಲೇ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ.

ಶಾಸಕರ ಬಂಧನಕ್ಕೆ ಸಿಐಡಿ ವಿಶೇಷ ತಂಡಗಳನ್ನು ರಚಿಸಿದೆ. ಆ ತಂಡಗಳು ಮಹಾರಾಷ್ಟ್ರಕ್ಕೆ ತೆರಳಿ, ಆರೋಪಿಗಾಗಿ ವಿವಿಧೆಡೆ ಹುಡುಕಾಟ ನಡೆಸುತ್ತಿವೆ. 

‘ಬೈರತಿ ಬಸವರಾಜ ಅವರು ಮಹಾರಾಷ್ಟ್ರದ ಸ್ಟಾರ್‌ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿರುವ ಮಾಹಿತಿ ಸಿಕ್ಕಿದೆ. ವಿಶೇಷ ತಂಡಗಳು ಅಲ್ಲಿಗೆ ತೆರಳಿವೆ. ಅವರು ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ‘ಲುಕ್‍ಔಟ್ ನೋಟಿಸ್’ ಜಾರಿ ಮಾಡಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ADVERTISEMENT

ಕಳೆದ ಡಿಸೆಂಬರ್‌ನಲ್ಲೂ ಬೈರತಿ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೂ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಇದಾದ ಬೆನ್ನಲ್ಲೇ ಶಾಸಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲೂ ಶಾಸಕರು ತಲೆಮರೆಸಿಕೊಂಡಿದ್ದರು.

ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿದಾಗ ‘ಶಾಸಕರ ವಿರುದ್ಧ ಬಲವಂತದ ಕ್ರಮ ಬೇಡ’ ಎಂದು ಹೈಕೋರ್ಟ್ ಸೂಚಿಸಿ, ಆದೇಶ ಕಾಯ್ದಿರಿಸಿತ್ತು. ‘ಪ್ರಕರಣದಲ್ಲಿ ತನಿಖೆಯ ವಿಧಾನದ ನಿರ್ಧಾರವನ್ನು ತನಿಖಾ ಪ್ರಾಧಿಕಾರದ ವಿವೇಚನೆಗೆ ಬಿಡಲಾಗಿದೆ. ಹೀಗಾಗಿ, ಬೈರತಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಗದು’ ಎಂದು ಹೈಕೋರ್ಟ್‌ ಪುನರುಚ್ಚರಿಸಿದ್ದು, ಶಾಸಕರಿಗೆ ಬಂಧನದ ಭೀತಿ ಎದುರಾಗಿದೆ.   

2025ರ ಜುಲೈ 15ರಂದು ಬಿಕ್ಲು ಶಿವು ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರತಿನಗರ ಠಾಣೆಯ ಪೊಲೀಸರು, ಬಸವರಾಜ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿತ್ತು.

‘ಜಾಗದ ವಿಚಾರವಾಗಿ ಜಗದೀಶ್, ಕಿರಣ್, ವಿಮಲ್‌, ಅನಿಲ್ ಮತ್ತು ಇತರರು ಶಾಸಕ ಬೈರತಿ ಬಸವರಾಜ​ ಅವರ ಕುಮ್ಮಕಿನಿಂದ ಕೊಲೆ ಮಾಡಿದ್ದಾರೆ’ ಎಂದು ಬಿಕ್ಲು ಶಿವು ಅವರ ತಾಯಿ ವಿಜಯಲಕ್ಷ್ಮಿ ನೀಡಿದ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಕೊಲೆ ಪ್ರಕರಣದ ಸಂಬಂಧ ಬೈರತಿ ಬಸವರಾಜ ಅವರೇ ಬಂದು ಸಿಐಡಿ ಎದುರು ಶರಣಾದರೆ ಒಳ್ಳೆಯದು. ಇಲ್ಲದಿದ್ದರೆ ಪೊಲೀಸರೇ ಅವರನ್ನು ಪತ್ತೆ ಹಚ್ಚಿ ಬಂಧಿಸುತ್ತಾರೆ
ಜಿ.ಪರಮೇಶ್ವರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.