ADVERTISEMENT

ಶಾಸಕ ಬೈರತಿ ಬಂಧನ ಅಗತ್ಯ: ಹೈಕೋರ್ಟ್‌ಗೆ ರಾಜ್ಯ ಪ್ರಾಸಿಕ್ಯೂಷನ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 15:56 IST
Last Updated 9 ಅಕ್ಟೋಬರ್ 2025, 15:56 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿರುವ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ ತನಿಖೆಗೆ ಹಾಜರಾದ ವೇಳೆ ಸುಳ್ಳು ಮಾಹಿತಿ ನೀಡಿದ್ದು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ರಾಜ್ಯ ಪ್ರಾಸಿಕ್ಯೂಷನ್‌ ಹೈಕೋರ್ಟ್‌ಗೆ ಅರುಹಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಭಾರತಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ಪ್ರಕರಣದ ಐದನೇ ಆರೋಪಿಯಾಗಿರುವ ಬೈರತಿ ಬಸವರಾಜ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಷನ್‌ನ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ‘ಪ್ರಕರಣದಲ್ಲಿ ಹಲವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಆರೋಪಿ ಬೈರತಿ ಬಸವರಾಜ್‌ ವಿರುದ್ಧ ಗಂಭೀರ ಸಾಕ್ಷ್ಯಗಳಿವೆ. ಒಂದು ವೇಳೆ ಸಾಕ್ಷ್ಯಾಧಾರಗಳು ಕೋರ್ಟ್‌ಗೆ ತೃಪ್ತಿ ತರದೇ ಹೋದರೆ ಪ್ರಕರಣ ರದ್ದುಪಡಿಸಬಹುದು’ ಎಂದು ಪ್ರತಿಪಾದಿಸಿದರು. ಇದನ್ನು ಅಲ್ಲಗಳೆದ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ.ಚೌಟ ‘ಈ ಪ್ರಕರಣದಲ್ಲಿ ಪೊಲೀಸರು ಅರ್ಜಿದಾರರ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ–2000) ಕಾಯ್ದೆ ಹೇರಿದ್ದಾರೆ.

ಪೊಲೀಸರು ರಾಜಕೀಯ ದ್ವೇಷದಿಂದ ಈ ಕ್ರಮ ಕೈಗೊಂಡಿದ್ದಾರೆ’ ಎಂದು ದೂರಿದರು. ‘ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಲು ಕೋರುವ ಬಗ್ಗೆ ಅರ್ಜಿದಾರರು ಚಿಂತಿಸುತ್ತಿದ್ದಾರೆ. ಹೀಗಾಗಿ ಮಧ್ಯಂತರ ರಕ್ಷಣೆ ತೆರವುಗೊಳಿಸಬಾರದು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅಂತಿಮ ವಿಚಾರಣೆಯನ್ನು ಇದೇ 23ಕ್ಕೆ ನಿಗದಿಪಡಿಸಿತು. ಅಲ್ಲಿಯವರೆಗೂ ಅರ್ಜಿದಾರರಿಗೆ ನೀಡಲಾಗಿರುವ ಬಂಧನದಿಂದ ರಕ್ಷಣೆ ಆದೇಶವನ್ನು ಮುಂದುವರಿಸಿ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.