ADVERTISEMENT

ಪುರುಷೋತ್ತಮ ಬಿಳಿಮಲೆ ಹೇಳಿಕೆಯಿಂದ ಯಕ್ಷಗಾನ ಕಲೆಗೆ ಅಪಮಾನ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:01 IST
Last Updated 20 ನವೆಂಬರ್ 2025, 0:01 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಪುತ್ತೂರು/ ಮಂಗಳೂರು: ‘ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗ ಕಾಮಿಗಳು. ಸ್ತ್ರೀವೇಷಧಾರಿಗಳಿಗೆ ಸಲಿಂಗಕಾಮಕ್ಕೆ ಒತ್ತಡ ಹಾಕಲಾಗುತ್ತದೆ ಎಂಬ ಹೇಳಿಕೆ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿದರಿಗೆ ಅಪಮಾನಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.  

ಪುತ್ತೂರಿನಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಇದು ಯಕ್ಷಗಾನ ಕಲೆಗೆ ಮಾಡಿದ ಅಪಮಾನ ಮಾತ್ರವಲ್ಲ, ಕರಾವಳಿಗೆ ಹಾಗೂ ಸಮಸ್ತ ಹಿಂದೂ ಧರ್ಮಕ್ಕೆ ತೋರಿದ ಅಗೌರವ. ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಇದು ಬಹಿರಂಗಗೊಳಿಸಿದೆ’ ಎಂದು ಟೀಕಿಸಿದರು.

ADVERTISEMENT

‘ಕರಾವಳಿಯ ಕಲೆ, ಸಂಸ್ಕೃತಿ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ಹೀಗೆ ಹೇಳುತ್ತಿರಲಿಲ್ಲ. ಬಿಳಿಮಲೆ ಅವರನ್ನು ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ಸರ್ಕಾರ ಕೂಡಲೇ ಕಿತ್ತೊಗೆಯಬೇಕು. ಈ ಕುರಿತು ಪಕ್ಷಾತೀತವಾಗಿ ಹೋರಾಟ ಮಾಡಬೇಕಾದ ಅಗತ್ಯ ಇದೆ’ ಎಂದರು.  

ಅಸೂಕ್ಷ್ಮ ಹೇಳಿಕೆ:

‘ಬಿಳಿಮಲೆ ಅವರ ಹೇಳಿಕೆ ಸತ್ಯಕ್ಕೆ ದೂರವಾದುದು ಹಾಗೂ ಅಸೂಕ್ಷ್ಮತೆಯಿಂದ ಕೂಡಿದೆ. ಈ ಅತಿರೇಕದ ಹೇಳಿಕೆ ಖಂಡನೀಯ’ ಎಂದು ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಶಿ ಅವರು ಪ್ರತಿಕ್ರಿಯಿಸಿದ್ದಾರೆ. 

‘ಯಕ್ಷಗಾನ ಕಲೆಯ ಅರಿವು ಇರುವ ಹಾಗೂ ಜವಾಬ್ದಾರಿ ಸ್ಥಾನದಲ್ಲಿರುವ ಬಿಳಿಮಲೆ ಅವರಂತಹ ವಿದ್ವಾಂಸ, ಕಲಾವಿದ ಈ ರೀತಿ ಹೇಳಿದ್ದು ದುಃಖಕರ’ ಎಂದು ಹೇಳಿದ್ದಾರೆ.  

‘ಕಲಾವಿದರ ಕುರಿತು ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆ ಮೂಲಕ ಬಿಳಿಮಲೆ ಅವರು ತಮ್ಮ ಸ್ಥಾನಕ್ಕೆ ಚ್ಯುತಿಯನ್ನುಂಟು ಮಾಡಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಪ್ರದೀಪ ಕುಮಾರ್ ಕಲ್ಕೂರ ಅವರು ಪ್ರತಿಕ್ರಿಯಿಸಿದ್ದಾರೆ. 

ಅವಹೇಳನಕಾರಿ ಹೇಳಿಕೆ:

ಕಲಾವಿದರ ಕುರಿತು ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆ ಮೂಲಕ ಬಿಳಿಮಲೆ ಅವರು ತಮ್ಮ ಸ್ಥಾನಕ್ಕೆ ಚ್ಯುತಿಯನ್ನುಂಟು ಮಾಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಪ್ರದೀಪ ಕುಮಾರ್ ಕಲ್ಕೂರ ಹೇಳಿದ್ದಾರೆ.

ಹೇಳಿಕೆ ತಪ್ಪು: ಶಿವರಾಮ ಶೆಟ್ಟಿ

‘ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿದರ ಬಗ್ಗೆ ಯಾವ ಉದ್ದೇಶ ಇಟ್ಟುಕೊಂಡು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರು ಆ ರೀತಿ ಹೇಳಿದ್ದು ತಪ್ಪು’ ಎಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯಿಸಿದರು. 

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಪ್ರಪಂಚದಲ್ಲಿ ಸರಿ– ತಪ್ಪು ,
ಯಕ್ಷಗಾನದಲ್ಲೂ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಪುರುಷೋತ್ತಮ ಬಿಳಿಮಲೆಯಂತಹ ಮೇಧಾವಿ ಇಂತಹ ಹೇಳಿಕೆ ನೀಡಬಾರದಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.