ADVERTISEMENT

ಸ್ವಾರಸ್ಯ |‘ನಾನು ಮುಖ್ಯಮಂತ್ರಿಯಾಗಿ ಎಂದ ಮಾಧುಸ್ವಾಮಿ’

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 20:13 IST
Last Updated 20 ಆಗಸ್ಟ್ 2019, 20:13 IST
ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿದರು. –ಪ‍್ರಜಾವಾಣಿ ಚಿತ್ರ
ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿದರು. –ಪ‍್ರಜಾವಾಣಿ ಚಿತ್ರ   

ಬೆಂಗಳೂರು: ಸಚಿವ ಸಂ‍ಪುಟ ವಿಸ್ತರಣೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿಕಂಡು–ಕೇಳಿದ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.

‘ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ ‘ನಾನು ಮುಖ್ಯಮಂತ್ರಿಯಾಗಿ... ’ ಎಂದು ಬಾಯಿತಪ್ಪಿ ಹೇಳಿದರು. ‘ನಾನು ಮುಖ್ಯಮಂತ್ರಿಯಾಗಿ’... ಎಂದು ಹೇಳುತ್ತಿದ್ದಂತೆ ಅವರಿಗೆ ತಪ್ಪಿನ ಅರಿವಾಯಿತು. ತಕ್ಷಣ ಎಚ್ಚೆತ್ತುಕೊಂಡು ‘ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ’ ಎಂದರು.

ಮುಖ್ಯಮಂತ್ರಿಯಾಗಿ ಎಂದು ಹೇಳುತ್ತಿದ್ದಂತೆ ಯಡಿಯೂರಪ್ಪ ಮೊಗದಲ್ಲೂ ಮಂದಹಾಸ ಕಾಣಿಸಿತು. ಮತ್ತೊಮ್ಮೆ ನಗುತ್ತಲೇ ಮಾಧುಸ್ವಾಮಿಯತ್ತ ಕುಡಿನೋಟ ಬೀರಿದರು.

ADVERTISEMENT

ಹಳೆ ಮೈಸೂರು ನಿರ್ಲಕ್ಷ್ಯ:

ದಕ್ಷಿಣ ಭಾಗದ ಜಿಲ್ಲೆಗಳಿಗೆ ಕನಿಷ್ಠ ಪ್ರಾತಿನಿಧ್ಯವನ್ನೂ ಬಿಜೆಪಿ ಸರ್ಕಾರ ನೀಡಿಲ್ಲ. ಮೈಸೂರು ಜಿಲ್ಲೆಯಲ್ಲಿ ಶಾಸಕರಿದ್ದರೂ ಅವಕಾಶ ವಂಚಿತರಾಗಿದ್ದಾರೆ.ಬಿಜೆಪಿ ಶಾಸಕರು ಇರುವ ಕೊಡಗು, ದಾವಣಗೆರೆ, ಹಾಸನ,ಚಾಮರಾಜನಗರ ಜಿಲ್ಲೆಗಳಿಂದ ಯಾರೊಬ್ಬರೂ ಸಚಿವರಾಗಿಲ್ಲ.

ನಾಲ್ವರು ಹೊಸಬರು

ಯಡಿಯೂರಪ್ಪ ಸಚಿವ ಸಂಪುಟದ 17 ಸಚಿವರಲ್ಲಿ ನಾಲ್ವರು ಹೊಸಬರು ಅಧಿಕಾರ ಪಡೆದಿದ್ದಾರೆ. ಡಾ.ಸಿ.ಎನ್.ಅಶ್ವಥನಾರಾಯಣ (ಮಲ್ಲೇಶ್ವರ), ಜೆ.ಸಿ.ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ), ಪ್ರಭು ಚವ್ಹಾಣ್ (ಔರಾದ್), ಶಶಿಕಲಾ ಜೊಲ್ಲೆ (ನಿಪ್ಪಾಣಿ) ಮೊದಲ ಸಲ ಸಚಿವರಾಗಿದ್ದಾರೆ.

ಯಡಿಯೂರಪ್ಪ ಕಾಲಿಗೆ ಬಿದ್ದರು

17 ಸಚಿವರಲ್ಲಿ ಕೆ.ಎಸ್.ಈಶ್ವರಪ್ಪ ಸೇರಿದಂತೆ 9 ಮಂದಿ ಯಡಿಯೂರಪ್ಪ ಕಾಲುಮುಟ್ಟಿ ಆಶೀರ್ವಾದ ಪಡೆದುಕೊಂಡರು. ಅಥಣಿ ಕ್ಷೇತ್ರದಿಂದ ಸೋತಿದ್ದ ಲಕ್ಷ್ಮಣ ಸವದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮುಖ್ಯಮಂತ್ರಿಯಿಂದ ಹೂಗುಚ್ಛ ಪಡೆದುಕೊಂಡು, ಕಾಲಿಗೆ ನಮಸ್ಕರಿಸಿದರು. ನಂತರದ ಸರದಿ ಕೆ.ಎಸ್.ಈಶ್ವರಪ್ಪ ಅವರದ್ದಾಗಿತ್ತು. ಬಿ.ಶ್ರೀರಾಮುಲು, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಎಚ್.ನಾಗೇಶ್, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ ಅವರು ಯಡಿಯೂರಪ್ಪ ಕಾಲಿಗೆ ನಮಸ್ಕರಿಸಿದರು.

ಬಸವಾದಿ ಪ್ರಮುಖರು, ಮಾತಾ ಜಗದಾಂಬಾ ಹೆಸರಿನಲ್ಲಿ ಪ್ರಮಾಣ

ವಿ.ಸೋಮಣ್ಣ ಅವರು ‘ಬಸವಾದಿ ಪ್ರಮುಖರ’ ಹೆಸರಿನಲ್ಲಿ ಹಾಗೂ ಪ್ರಭು ಚವ್ಹಾಣ್ ‘ಮಾತಾ ಜಗದಾಂಬಾ’ ಹೆಸರಿನಲ್ಲಿ ಪ್ರಮಾಣ ಮಾಡಿದರು.ಉಳಿದವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಲಂಬಾಣಿ ಪೋಷಾಕು

ಪ್ರಮಾಣ ವಚನ ಸ್ವೀಕರಿಸಲು ಎಲ್ಲರೂ ಸೂಟು, ಬೂಟು ತೊಟ್ಟು ಬಂದಿದ್ದರೆ, ಔರಾದ್ ಶಾಸಕ ಪ್ರಭು ಚವ್ಹಾಣ್ ಮಾತ್ರ ಇತರರಿಗಿಂತ ಭಿನ್ನವಾಗಿ ಗಮನ ಸೆಳೆದರು.

ಚವ್ಹಾಣ್ ಅವರು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು. ಲಂಬಾಣಿ ಸಂಪ್ರದಾಯ ಪ್ರತಿಬಿಂಬಿಸುವ ಪೇಟ ತೊಟ್ಟು, ಲಂಬಾಣಿ ಉಡುಗೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ರಾಷ್ಟ್ರ ನಾಯಕರ ಗೈರು

ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಪಕ್ಷದ ಕೇಂದ್ರ ನಾಯಕರು ದೂರವೇ ಉಳಿದಿದ್ದರು. ಯಾವೊಬ್ಬ ಪ್ರಮುಖ ನಾಯಕರೂ ಭಾಗವಹಿಸಿರಲಿಲ್ಲ.‌

ರಾಜ್ಯ ನಾಯಕರ ಗೈರು

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ, ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು.

ಪಕ್ಷದ ಎಲ್ಲ ಶಾಸಕರು ಬೆಂಗಳೂರಿಗೆ ಬರಬೇಕು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಯಡಿಯೂರಪ್ಪ ಸೂಚಿಸಿದ್ದರು.

* ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.