ADVERTISEMENT

ಸಂಪುಟ ವಿಸ್ತರಣೆ ವಿಳಂಬ

ಬೇಡಿಕೆಗಳ ಈಡೇರಿಕೆಗೆ ನೂತನ ಶಾಸಕರ ಒತ್ತಡ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 20:30 IST
Last Updated 11 ಡಿಸೆಂಬರ್ 2019, 20:30 IST
   

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ತಡವಾಗುತ್ತಿರುವ ಬೆನ್ನಲ್ಲೇ ನೂತನ ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಪ್ರಮುಖ ಖಾತೆಗಳೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರಿದ್ದಾರೆ.

ಮಂಗಳವಾರ ರಾತ್ರಿ ಸಭೆ ನಡೆಸಿದ ಈ ಶಾಸಕರು ಬೆಳಿಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟು, ಯಾವುದೇ ಕಾರಣ ಈ ಹಿಂದೆ ಕೊಟ್ಟ ಮಾತಿನಿಂದ ಹಿಂದೆ ಸರಿಯಬಾರದು ಎಂದು ತಾಕೀತು ಮಾಡಿದ್ದಾರೆ.

ಪರಾಜಿತ ಅಭ್ಯರ್ಥಿ ಎಚ್‌.ವಿಶ್ವನಾಥ್‌, ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌, ರಮೇಶ ಜಾರಕಿಹೊಳಿ, ಬಿ.ಸಿ.ಪಾಟೀಲ, ಡಾ.ಸುಧಾಕರ್‌ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ತಾವು ನಡೆಸಿದ ಸಭೆ ಮತ್ತು ಅಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ರಮೇಶ ಜಾರಕಿಹೊಳಿ ವಿವರ ನೀಡಿದರು. ‘ಗೆದ್ದವರಿಗೆ ಪ್ರಮುಖ ಖಾತೆಗಳನ್ನು ನೀಡಬೇಕು. ಸೋತವರಿಗೆ ಸಚಿವ ಸ್ಥಾನ ಅಥವಾ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಲಾಯಿತು’ ಎಂದು ಅವರು ಹೇಳಿದರು.

ADVERTISEMENT

ಮುನಿರತ್ನ ಮತ್ತು ಪ್ರತಾಪ್‌ಗೌಡ ಪಾಟೀಲ ಅವರ ವಿರುದ್ಧ ಸಲ್ಲಿಸಿರುವ ದೂರುಗಳನ್ನು ಹಿಂದಕ್ಕೆ ಪಡೆಯಬೇಕು. ಎರಡೂ ಕ್ಷೇತ್ರಗಳಲ್ಲಿ ಆದಷ್ಟು ಬೇಗ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿರುವುದಾಗಿ ರಮೇಶ ತಿಳಿಸಿದರು.

‘ಮುಖ್ಯಮಂತ್ರಿಯವರಿಗೆ ಅಭಿನಂದನೆ ತಿಳಿಸಲು ನಾವೆಲ್ಲರೂ ಒಟ್ಟಿಗೆ ಭೇಟಿ ಮಾಡಿದ್ದೆವು.ಮುನಿರತ್ನ ಅವರ ವಿಚಾರ ಬಗೆಹರಿಸಲು ಮನವಿ ಮಾಡಿದ್ದೇವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಉದ್ದೇಶಿಸಿದ್ದೇವೆ. ಅವರ ಸಮಯ ನೋಡಿಕೊಂಡು ಹೋಗುತ್ತೇವೆ’ ಎಂದು ಸೋಮಶೇಖರ್‌ ತಿಳಿಸಿದರು.

ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಅವರೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಮೇಲ್ಮನೆ ಪ್ರವೇಶಕ್ಕೆ ಪ್ರಯತ್ನ ನಡೆಸಿದ್ದಾರೆ ಎಂದೂ ಹೇಳಲಾಗಿದೆ.

ಸಂಪುಟ ವಿಸ್ತರಣೆ ಇನ್ನೂ ತಡ: ಸಚಿವ ಸಂಪುಟ ವಿಸ್ತರಣೆ ಇನ್ನೂ ಕೆಲವು ದಿನಗಳ ಕಾಲ ತಡವಾಗಲಿದೆ. ಸಂಸತ್‌ ಕಲಾಪ ಮುಗಿದ ಬಳಿಕವೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ, ಸಂಪುಟ ವಿಸ್ತರಣೆಗೆ ಅನುಮತಿ ಕೋರಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇನ್ನು ಡಿಸಿಎಂ ಹುದ್ದೆ ಇಲ್ಲ

ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅಥವಾ ಇತರ ಹಿರಿಯ ಶಾಸಕರು ಡಿಸಿಎಂ ಹುದ್ದೆಗಳಿಗೆ ಬೇಡಿಕೆ ಇಟ್ಟರೆ ಅದಕ್ಕೆ ಸೊಪ್ಪು ಹಾಕದಿರಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಮೂವರಿಗೆ ಡಿಸಿಎಂ ಹುದ್ದೆ ನೀಡಿರುವುದರಿಂದ ಇನ್ನು ಡಿಸಿಎಂಗಳ ಸಂಖ್ಯೆ ಹೆಚ್ಚಿಸುತ್ತಲೇ ಹೋದರೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಹೊಸ ಶಾಸಕರಿಗೆ ಸಚಿವ ಸ್ಥಾನ ಮಾತ್ರ ನೀಡಲಾಗುವುದು. ಅಗತ್ಯ ಬಿದ್ದರೆ, ಈಗಾಗಲೇ ಮೂವರು ಡಿಸಿಎಂಗಳಿಂದ ಆ ಸ್ಥಾನಮಾನ ಹಿಂದಕ್ಕೆ ಪಡೆಯಲೂಬಹುದು ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.