ವಿಧಾನಸೌಧ
ಬೆಂಗಳೂರು: ಬೇಸಿಗೆ ಹತ್ತಿರ ಬರುತ್ತಿರುವ ಕಾರಣ ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಹರಿಸುವುದು ಮತ್ತು ಅದರ ನಿರ್ವಹಣೆಗಾಗಿ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
‘ಈ ಸಮಿತಿಯ ಒಪ್ಪಿಗೆ ಪಡೆಯದೇ ಜಲಾಶಯಗಳಿಂದ ನೀರು ಹರಿಸುವಂತಿಲ್ಲ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಪ್ರಮುಖ ಜಲಾಶಯಗಳ ನಿರ್ವಹಣೆಯನ್ನು ಕಂದಾಯ ಇಲಾಖೆಗೆ (ವಿಪತ್ತು ನಿರ್ವಹಣೆ) ವಹಿಸಲಾಗುವುದು. ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯ ಅಧ್ಯಕ್ಷತೆಯನ್ನು ಮುಖ್ಯಕಾರ್ಯದರ್ಶಿ ವಹಿಸುತ್ತಾರೆ. ಜಲಾಶಯಗಳಿಂದ ನೀರು ಹರಿಸಲು ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯ ಎಂದು ಅವರು ಹೇಳಿದರು.
ವಿಜಯಪುರ ಜಿಲ್ಲೆ ಸಿಂಧಗಿಯಲ್ಲಿ ಹೊಸ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲು ಹಂತ ಹಂತವಾಗಿ ₹145.73 ಕೋಟಿ ಬಿಡುಗಡೆ ಮಾಡಲು, 126 ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲು, ಮೊದಲ ಹಂತದಲ್ಲಿ ಆಡಳಿತ ಮತ್ತು ಶೈಕ್ಷಣಿಕ ಭವನ ನಿರ್ಮಾಣಕ್ಕೆ ₹39 ಕೋಟಿ ವಿನಿಯೋಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಪಾಟೀಲ ತಿಳಿಸಿದರು.
ಬಂಕಾಪುರ ತೋಳ ವನ್ಯಜೀವಿಧಾಮ, ಉತ್ತಾರೆಗುಡ್ಡ ವನ್ಯಜೀವಿಧಾಮ ಮತ್ತು ಅರಸೀಕೆರೆ ಕರಡಿ ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸುವ ಹೊಸ ಪ್ರಸ್ತಾವನೆಗಳು ಹಾಗೂ ಭದ್ರಾ ವನ್ಯಜೀವಿಧಾಮ ಪರಿಷ್ಕೃತ ಪರಿಸರ ಸೂಕ್ಷ್ಮವಲಯದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
‘ನಿಪುಣ್ ಕರ್ನಾಟಕ’ ಮಾರ್ಗಸೂಚಿ ಬದಲು
‘ನಿಪುಣ್ ಕರ್ನಾಟಕ’ ಯೋಜನೆಯ ಮಾರ್ಗಸೂಚಿಗಳನ್ನು ಜಾರಿಗೆ ತಂದ ಬಳಿಕ ಆಸಕ್ತ ಉದ್ಯಮ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಾಯಿತು. ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದು, ಅದಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಪಾಟೀಲ ತಿಳಿಸಿದರು.
ಏನೇನು ಬದಲಾವಣೆ?:
* ಪಾಲುದಾರಿಕೆ ಹೊಂದಿರುವ ಕಂಪನಿಯು ಈಗಾಗಲೇ ಉದ್ಯೋಗದಲ್ಲಿರುವವರನ್ನು ಹೊರತುಪಡಿಸಿ, ತರಬೇತಿ ಪಡೆದವರಲ್ಲಿ ಕನಿಷ್ಠ ಶೇ 70ರಷ್ಟು ನೇಮಕಾತಿ ಖಚಿತಪಡಿಸಿಕೊಳ್ಳಬೇಕು.
*ಕೋರ್ಸ್ ಮುಗಿದ 8 ತಿಂಗಳೊಳಗೆ ಶೇ 70ರಷ್ಟು ತರಬೇತಿ ಪಡೆದ ಅಭ್ಯರ್ಥಿಗಳನ್ನು ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಬೇಕು.
*8ನೇ ತಿಂಗಳ ಕೊನೆಯಲ್ಲಿ ನೇಮಕಾತಿಯು ಶೇ 70ಕ್ಕಿಂತ ಕಡಿಮೆ ಇದ್ದರೆ, ನೇಮಕಾತಿ ಹೆಚ್ಚಿಸಲು ಮತ್ತು ನೇಮಕಾತಿ ಸುಗಮಗೊಳಿಸಲು ಪಾಲುದಾರ ಸಂಸ್ಥೆಯು ಕಡ್ಡಾಯವಾಗಿ ರಿಫ್ರೆಶರ್ ಕೋರ್ಸ್ ಅನ್ನು ತನ್ನ ಸ್ವಂತ ವೆಚ್ಚದಲ್ಲಿ ಆಯೋಜಿಸಬೇಕು. ರಿಫ್ರೆಶರ್ ಕೋರ್ಸ್ ಮುಗಿದ ನಂತರ ಪಾಲುದಾರ ಕಂಪನಿಯು ಕನಿಷ್ಠ ಶೇ 40 ರಷ್ಟು ತರಬೇತಿ ಪಡೆದವರನ್ನು ನೇಮಕ ಮಾಡಿಕೊಳ್ಳಬೇಕು.
ಪ್ರಮುಖ ತೀರ್ಮಾನಗಳು
*ಬೆಂಗಳೂರಿನ ವಿಕಾಸಸೌಧ ಮುಂದಿನ 25 ಗುಂಟೆ ಜಾಗದಲ್ಲಿ ‘ಡಾ.ಅಂಬೇಡ್ಕರ್ ಸ್ಫೂರ್ತಿಸೌಧ’ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ₹87 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ
*ಮೈಸೂರಿನ ಕರ್ನಾಟಕ ಕಲಾಮಂದಿರ, ರಂಗಾಯಣ ಹಾಗೂ ವಿಶ್ವ ಕನ್ನಡ ಸಮ್ಮೇಳನ ಅತಿಥಿಗೃಹ ಕಟ್ಟಡಗಳ ಸಮಗ್ರ ನವೀಕರಣ ಕಾಮಗಾರಿಗೆ ₹14.64 ಕೋಟಿ
*ಗದಗ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೆಸರನ್ನು ಕೆ.ಎಚ್.ಪಾಟೀಲ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂದು ಹೆಸರಿಸಲು ತೀರ್ಮಾನ
*ಸಿಂಧಗಿ, ಆನೇಕಲ್, ಮಳವಳ್ಳಿ, ಹೊಸಕೋಟೆ ಪ್ರಜಾಸೌಧಕ್ಕೆ ಅನುದಾನ, ಚಿಕ್ಕಮಗಳೂರಿನಲ್ಲಿ ಪ್ರಜಾಸೌಧ ಜಿಲ್ಲಾ ಆಡಳಿತ ಕೇಂದ್ರ ಕಟ್ಟಡ ಕಾಮಗಾರಿಗೆ ಒಪ್ಪಿಗೆ
*ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಗಳಲ್ಲಿ ಬಿಲ್ಡ್– ಓನ್– ಆಪರೇಟ್ ಮಾದರಿಯಲ್ಲಿ ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ನಿಯೋಜನೆ ಮತ್ತು ಐಟಿ ಮೂಲಸೌಕರ್ಯಗಳ ಸ್ಥಾಪನೆ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ₹637.45 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ
*ರಾಜ್ಯ ವಿಪತ್ತು ಉಪಶಮನ ನಿಧಿ ಅಡಿ ₹194.81 ಕೋಟಿ ಅಂದಾಜು ವೆಚ್ಚದ ಒಟ್ಟು 330 ಉಪಶಮನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ
*ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರಿನ ಡಾ. ಅಂಬೇಡ್ಕರ್ ಭವನದ ಬಾಕಿ ಇರುವ ಕಾಮಗಾರಿಗಳ ₹23.83 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ
*ಕರ್ನಾಟಕ ರಾಜ್ಯ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮ 2025ಕ್ಕೆ ಅನುಮೋದನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.