ADVERTISEMENT

Caste Census | ಸಚಿವ ಸಂಪುಟದ ವಿಶೇಷ ಸಭೆ ಇಂದು: ಒಬಿಸಿ ಮೀಸಲು ಶೇ 51ಕ್ಕೆ?

ರಾಜೇಶ್ ರೈ ಚಟ್ಲ
Published 16 ಏಪ್ರಿಲ್ 2025, 20:15 IST
Last Updated 16 ಏಪ್ರಿಲ್ 2025, 20:15 IST
<div class="paragraphs"><p>ಸಭೆ</p></div>

ಸಭೆ

   

ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಪ್ರಸ್ತುತ ಇರುವ ಮೀಸಲಾತಿ ಪ್ರಮಾಣವನ್ನು ಶೇ 32ರಿಂದ ಶೇ 51ಕ್ಕೆ ಹೆಚ್ಚಿಸುವಂತೆ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಪ್ರಮುಖ ಶಿಫಾರಸನ್ನು ಅಂಗೀಕರಿಸುವ ಮಹತ್ವದ ವಿಷಯ ಗುರುವಾರ ನಡೆಯಲಿರುವ ಸಚಿವ ಸಂಪುಟದ ವಿಶೇಷ ಸಭೆಯ ಮುಂದೆ ಬರಲಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ‘ದತ್ತಾಂಶ ಅಧ್ಯಯನ ವರದಿ’ಯನ್ನು ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ವರದಿಯನ್ನು ಏಪ್ರಿಲ್ 11ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿತ್ತು. ಈ ಬಗ್ಗೆ ಚರ್ಚಿಸಲು ಗುರುವಾರ ನಾಲ್ಕು ಗಂಟೆಗೆ ಸಚಿವ ಸಂಪುಟದ ವಿಶೇಷ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದಾರೆ. 

ADVERTISEMENT

ಸಚಿವ ಸಂಪುಟಯ ಮುಂದೆ ಮಂಡಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿದ್ಧಪಡಿಸಿದ ಟಿಪ್ಪಣಿ ಹಾಗೂ ಪ‍್ರಸ್ತಾವದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ವಿವಿಧ ಪ್ರವರ್ಗಗಳಡಿ ಇದ್ದ ಜಾತಿಗಳನ್ನು ಸಾಮಾಜಿಕ, ಶೈಕ್ಷಣಿಕ, ಜೀವನೋಪಾಯ, ಔದ್ಯೋಗಿಕ ಮಾನದಂಡಗಳ ಆಧಾರದ ಮೇಲೆ ಪಡೆದ ಅಂಕಗಳಿಗೆ ಅನುಗುಣವಾಗಿ ಆಂತರಿಕ ಬದಲಾವಣೆಯೊಂದಿಗೆ ಶೇ 32ರ ಮೀಸಲಾತಿ ಪ್ರಮಾಣವನ್ನು ಪ್ರವರ್ಗವಾರು ವರ್ಗೀಕರಿಸುವಂತೆ ಪ್ರಸ್ತಾಪಿಸಿದೆ.

ಆಯೋಗದ ಶಿಫಾರಸಿನಂತೆ ಹಾಲಿ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಪ್ರವರ್ಗವಾರು ಮೀಸಲಾತಿ ಪ್ರಮಾಣವನ್ನು ಶೇ 32ರಿಂದ ಶೇ 51ಕ್ಕೆ ಹೆಚ್ಚಿಸಲು ಅಂಗೀಕಾರ ನೀಡಬೇಕು. ಅಲ್ಲದೆ, ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕೆಂಬ ಈ ಪ್ರಸ್ತಾವವನ್ನು ಸಚಿವ ಸಂಪುಟ ಸಭೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಡಿಸಿದೆ.

ಇಲಾಖೆಯ ಪ್ರಸ್ತಾವದಲ್ಲಿ ಏನಿದೆ?: ಜನಸಂಖ್ಯೆ ಆಧರಿಸಿ ತಮಿಳುನಾಡು ರಾಜ್ಯ ಶೇ 69ರಷ್ಟು ಮತ್ತು ಜಾರ್ಖಂಡ್‌ ರಾಜ್ಯ ಶೇ 77ರಷ್ಟು ಮೀಸಲಾತಿಯನ್ನು ಹೆಚ್ಚಿಸಿ ಅಳವಡಿಸಿಕೊಂಡಿದೆ. ಪ್ರಸ್ತುತ ಆಯೋಗವು ಸಲ್ಲಿಸಿರುವ ವರದಿಯಲ್ಲಿ ಮುಖ್ಯ ಜಾತಿಯೊಂದಿಗೆ ಅದರ ಎಲ್ಲ ಉಪ ಜಾತಿಗಳನ್ನು ತಂದಿರುವುದರಿಂದ ಮತ್ತು ವಿವಿಧ ಪ್ರವರ್ಗಗಳಡಿ ಸೇರಿಸಲು ಈ ಹಿಂದಿನ ಆಯೋಗಗಳು ಶಿಫಾರಸು ಮಾಡಿರುವ ಜಾತಿಗಳನ್ನು ಆಯಾ ಪ್ರವರ್ಗಗಳಡಿ ಸೇರಿಸಿರುವುದರಿಂದ ಪ್ರಸ್ತಾವಿತ ಪರಿಷ್ಕೃತ ಮೀಸಲಾತಿ ಪಟ್ಟಿಯಲ್ಲಿ ಜಾತಿ/ಉಪ ಜಾತಿಗಳ ಸಂಖ್ಯೆ ಮತ್ತು ಅದರಡಿಯಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ನಮೂದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೇಳಿದೆ.

ಸಂವಿಧಾನದ ಪರಿಚ್ಛೇದ 103ರಲ್ಲಿ ಯಾವುದೇ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆ ಆಗದೇ ಇರುವ ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿ  ಜಾರಿಗೆ ತರಲಾಗಿದೆ. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಈ ತಿದ್ದುಪಡಿಯನ್ನು ಎತ್ತಿಹಿಡಿದಿದೆ. ಬದಲಾದ ಕಾಲಘಟ್ಟದಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 18ರಿಂದ 24ಕ್ಕೆ ಹೆಚ್ಚಿಸಿರುವುದರಿಂದ ಪ್ರಸ್ತುತ ರಾಜ್ಯದಲ್ಲಿ ಶೇ 56ರಷ್ಟು ಮೀಸಲಾತಿ ಪ್ರಮಾಣ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಆರ್ಥಿಕ ದುರ್ಬಲ ವರ್ಗದವರಿಗೆ ಶೇ 10ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದೆ. ಆದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಇಂದಿರಾ ಸಾಹ್ನಿ ವಿರುದ್ಧ ಕೇಂದ್ರ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಮಿತಿಗೊಳಿಸಬೇಕು ಎಂಬುದು ಜಾರಿಯಲ್ಲಿ ಇಲ್ಲ. ಹೀಗಾಗಿ, ಆಯೋಗದ ಶಿಫಾರಸಿಗೆ ಅನುಮೋದನೆ ನೀಡಬೇಕು ಎಂದೂ ಇಲಾಖೆ ವಿವರಿಸಿದೆ.

ತಜ್ಞರ ಸಮಿತಿಯೊ? ಸಂಪುಟ ಉಪ ಸಮಿತಿಯೊ?

ದತ್ತಾಂಶಗಳ ಅಧ್ಯಯನ ವರದಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿವಿಧ ಸಮುದಾಯಗಳ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ವರದಿಯಲ್ಲಿ ನಮೂದಾಗಿರುವ ಜಾತಿ ಜನಸಂಖ್ಯೆಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಪರ ಆಯಾ ಸಮುದಾಯಗಳು ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ, ಆ ಸಮುದಾಯಗಳ ‌ಸಚಿವರು ವರದಿಯನ್ನು ಅಂಗೀಕರಿಸದಂತೆ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಆದರೆ, ಸಮೀಕ್ಷೆಯು ವೈಜ್ಞಾನಿಕವಾಗಿ ನಡೆದಿದ್ದು, ತಪ್ಪುಗಳಿದ್ದರೆ ಸರಿಪಡಿಸುವ ಅವಕಾಶ ಇರುವುದರಿಂದ ಶಿಫಾರಸುಗಳಿಗೆ ಅನುಮೋದನೆ ನೀಡುವಂತೆ ಹಿಂದುಳಿದ ವರ್ಗಕ್ಕೆ ಸೇರಿದ ಸಚಿವರು ನಿಲುವು ವ್ಯಕ್ತಪಡಿಸಬಹುದು. ಅಂತಿಮವಾಗಿ, ಅಧ್ಯಯನ ವರದಿಯ ಪರಾಮರ್ಶೆಗೆ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಸಮಿತಿ ಅಥವಾ ಸಚಿವ ಸಂಪುಟ ಉಪ ಸಮಿತಿ ರಚಿಸುವ ತೀರ್ಮಾನವನ್ನು ಗುರುವಾರದ ಸಭೆ ತೆಗೆದುಕೊಳ್ಳುವ ಸಂಭವವಿದೆ

ವರದಿ ಅನುಷ್ಠಾನಕ್ಕೆ ಹಿಂದುಳಿದವರ ಒತ್ತಡ

‘ಜಾತಿ ಜನಗಣತಿ ವರದಿಯನ್ನು ಸರ್ಕಾರ ಕೂಡಲೇ ಚರ್ಚೆಗೆ ಮುಕ್ತಗೊಳಿಸಬೇಕು.
ನ್ಯೂನತೆಗಳಿದ್ದರೆ ಸರಿಪಡಿಸಿ, ಅದರ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸುವ ನಿರ್ಣಯವನ್ನು ಬುಧವಾರ ನಡೆದ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಭೆಯಲ್ಲಿ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.