ADVERTISEMENT

ಎಂಎಸ್‌ಒಗಳ ವಿರುದ್ಧ ‘ಟ್ರಾಯ್‌’ಗೆ ಆಪರೇಟರ್‌ಗಳ ದೂರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:15 IST
Last Updated 7 ಮಾರ್ಚ್ 2019, 19:15 IST
   

ಬೆಂಗಳೂರು: ತಾಂತ್ರಿಕ ಸಮಸ್ಯೆ ಬಗೆಹರಿಯುವವರೆಗೆ ಗ್ರಾಹಕರಿಗೆ ‘ಬೆಸ್ಟ್‌ ಫಿಟ್‌ ಪ್ಯಾಕೇಜ್‌’ ನೀಡಬೇಕು ಎಂಬ ನಿರ್ದೇಶನವನ್ನು ಎಂಎಸ್‌ಒಗಳು ಗಾಳಿಗೆ ತೂರಿರುವುದರಿಂದ ಸಮಸ್ಯೆ ಆಗಿದೆ ಎಂದು ಕೇಬಲ್‌ ಆಪರೇಟರ್‌ಗಳು ಟ್ರಾಯ್‌ಗೆ ಪತ್ರ ಬರೆದು ದೂರು ನೀಡಿದ್ದಾರೆ.

ಗ್ರಾಹಕರಿಗೆ ‘ಬೆಸ್ಟ್‌ ಫಿಟ್‌ ಪ್ಯಾಕೇಜ್‌’ ನೀಡುತ್ತಿಲ್ಲ. ಇವರು ಉಚಿತ ಚಾನೆಲ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ಚಾನೆಲ್‌ಗಳನ್ನು ಎಂಎಸ್‌ಒಗಳು ಕಿತ್ತು ಹಾಕಿದ್ದಾರೆ. ಇದರಿಂದಾಗಿ ಕೇಬಲ್‌ ಆಪರೇಟರ್‌ಗಳು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಬೇಕಾಗಿದೆ ಎಂದು ಕರ್ನಾಟಕ ಡಿಜಿಟಲ್‌ ಕೇಬಲ್ ಆಪರೇಟರ್‌ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಯತೀಶ್‌ ಹೇಳಿದ್ದಾರೆ.

‘ಎಂಎಸ್‌ಒಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ನಾವು ಡಿಟಿಎಚ್‌ ಮತ್ತು ಕೇಬಲ್‌ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ. ಗ್ರಾಹಕರ ಸೆಟ್‌ ಟಾಪ್‌ ಬಾಕ್ಸ್‌ಗಳನ್ನು ನಾವು ಆ್ಯಕ್ಟಿವೇಟ್‌ ಮಾಡಿದರೂ, ಅವು ಆ್ಯಕ್ಟಿವೇಟ್‌ ಆಗುತ್ತಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ಅಚ್ಚರಿ ಎಂದರೆ, ಕೆಲವರು ಮುಂಚಿತವಾಗಿ ಹಣ ಪಾವತಿ (ಪ್ರಿಪೇಯ್ಡ್‌) ಮಾಡಿದ್ದರೂ ಬಾಕಿ ಇದೆ ಎಂಬ ಸಂದೇಶ ಟಿ.ವಿ ಪರದೆ ಮೇಲೆ ಬರುತ್ತಿದೆ. ಕಸ್ಟಮರ್‌ ಕೇರ್‌ಗೆ ಕರೆ ಮಾಡಿದರೆ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.‌

ಇದರ ಪರಿಣಾಮ ಸಾಕಷ್ಟು ಗ್ರಾಹಕರು ಕೇಬಲ್‌ ಬಿಟ್ಟು ಡಿಟಿಎಚ್‌ಗೆ ವರ್ಗಾವಣೆ ಆಗುತ್ತಿದ್ದಾರೆ. ಆದ್ದರಿಂದ, ಈ ಎಲ್ಲ ಸಮಸ್ಯೆಗಳ ಬಗ್ಗೆಯೂ ಗಮನಹರಿಸಬೇಕು.

ಸಾಫ್ಟ್‌ವೇರ್‌ ಮತ್ತು ಸರ್ವರ್‌ ಸಮಸ್ಯೆಗಳು ಬಗೆಹರಿಯುವವರೆಗೆ ‘ಬೆಸ್ಟ್‌ಫಿಟ್‌ ಪ್ಯಾಕೇಜ್’ ಅನ್ನು ಜಾರಿಗೊಳಿಸುವಂತೆ ಎಂಎಸ್‌ಒಗಳಿಗೆ ತಾಕೀತು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.