ADVERTISEMENT

ಜಿಎಸ್‌ಟಿ ಐಟಿಸಿ: ಲೆಕ್ಕಕ್ಕೆ ಸಿಗದ ₹1,143 ಕೋಟಿ; ಸಿಎಜಿ ವರದಿಯಲ್ಲಿ ಉಲ್ಲೇಖ

ತೆರಿಗೆ ಸಂಗ್ರಹದಲ್ಲಿ ಅಧಿಕಾರಿಗಳಿಂದ ಭಾರಿ ಲೋಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 22:30 IST
Last Updated 19 ಆಗಸ್ಟ್ 2025, 22:30 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

ಬೆಂಗಳೂರು: ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್‌ಟಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ನೀಡುವಲ್ಲಿ ಭಾರಿ ಲೋಪವಾಗಿದ್ದು, ₹1,143.58 ಕೋಟಿಯಷ್ಟು ಲೆಕ್ಕ ಸಿಗುತ್ತಿಲ್ಲ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಮಂಗಳವಾರ ಮಂಡಿಸಲಾದ ‘ರಾಜ್ಯ ಕಂದಾಯ ವರದಿ–2023ರ ಮಾರ್ಚ್‌’ರಲ್ಲಿ ಸಿಎಜಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ADVERTISEMENT

‘ಜಿಎಸ್‌ಟಿ ಪಾವತಿದಾರರು, ತಾವು ಪಾವತಿಸುವ ಜಿಎಸ್‌ಟಿಗೆ ಐಟಿಸಿ ಪಡೆಯುತ್ತಿದ್ದಾರೆ. ಆದರೆ ಇದರಲ್ಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳು ತಾಳೆಯಾಗದೇ ಇರುವ ಬಗ್ಗೆ ಅನುಮಾನಗಳಿದ್ದವು. ಈ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ, ಅತ್ಯಂತ ದೊಡ್ಡ ಮೊತ್ತದ ವರ್ಗಾವಣೆ ನಡೆದಿದ್ದ 699 ಐಟಿಸಿ ಪ್ರಕರಣಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿತ್ತು. ಆದರೆ ವಾಣಿಜ್ಯ ತೆರಿಗೆ ಇಲಾಖೆಯು 679 ಪ್ರಕರಣಗಳ ಮಾಹಿತಿಯನ್ನಷ್ಟೇ ಸಲ್ಲಿಸಿತು’ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

‘ಈ 679ರ ಪೈಕಿ 232 ಪ್ರಕರಣಗಳಲ್ಲಿ ಐಟಿಸಿ ಕ್ಲೇಮು ಮಾಡಿದ್ದವರು ತಮ್ಮ ಇನ್‌ವಾಯ್ಸ್‌ಗಳಲ್ಲಿ ಉಲ್ಲೇಖಿಸಿದ್ದ ವ್ಯಾಪಾರಿಗಳ (ವೆಂಡರ್‌) ಜಿಎಸ್‌ಟಿ ಕಡತಗಳನ್ನು ಪರಿಶೀಲಿಸಲಾಯಿತು. ಕ್ಲೇಮು ಮಾಡಲಾದ ಐಟಿಸಿ ಪ್ರಕರಣಗಳಲ್ಲಿ ಈ ವ್ಯಾಪಾರಿಗಳು ಜಿಎಸ್‌ಟಿಯನ್ನು ಪಾವತಿಸಿಯೇ ಇಲ್ಲ ಎಂಬುದು ಗೊತ್ತಾಯಿತು. ಅದನ್ನು ವಸೂಲಿ ಮಾಡಲೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ’ ಎಂದು ವಿವರಿಸಿದೆ.

‘ಸರ್ಕಾರಕ್ಕೆ ಜಿಎಸ್‌ಟಿ ಪಾವತಿಯಾಗದೇ ಇದ್ದರೂ, ₹1,143.58 ಕೋಟಿಯಷ್ಟು ಐಟಿಸಿ ಕ್ಲೇಮುಗಳನ್ನು ಮಂಜೂರು ಮಾಡಲಾಗಿದೆ. ವ್ಯಾಪಾರಿಗಳು ತೆರಿಗೆ ವಂಚಿಸಿರುವುದು ಮಾತ್ರವಲ್ಲದೆ, ಐಟಿಸಿ ಕ್ಲೇಮು ಪಡೆದಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ಈ ಹಣ ಎಲ್ಲಿ ಹೋಗಿದೆ ಎಂಬುದಕ್ಕೆ ಲೆಕ್ಕವೇ ಇಲ್ಲ’ ಎಂದಿದೆ.

ಲೆಕ್ಕ ತಪ್ಪಿದ್ದೆಲ್ಲಿ...

  • ಆರ್ಥಿಕ ವರ್ಷ ಮತ್ತು ಕ್ಲೇಮು ಅವಧಿ ಮುಗಿದ ಬಳಿಕ ಸಲ್ಲಿಸಲಾದ ಐಟಿಸಿ ಕ್ಲೇಮುಗಳನ್ನು ಮಂಜೂರು ಮಾಡಲಾಗಿದೆ

  • ಪೂರೈಕೆದಾರರು ತೆರಿಗೆ ಪಾವತಿಸದಿದ್ದ ಸಂದರ್ಭದಲ್ಲಿಯೂ ಐಟಿಸಿ ಕ್ಲೇಮು ‌ನೀಡಲಾಗಿದೆ

  • ಪಾವತಿಯಾದ ಜಿಎಸ್‌ಟಿಗಿಂತ ಹೆಚ್ಚಿನ ಮೊತ್ತದ ಐಟಿಸಿ ಕ್ಲೇಮುಗಳನ್ನು ನೀಡಲಾಗಿದೆ

  • ಪೂರೈಕೆದಾರರಿಂದ ತೆರಿಗೆ ವಸೂಲಿಗೆ ಕ್ರಮ ತೆಗೆದುಕೊಂಡಿಲ್ಲ

  • ತಡವಾಗಿ ಜಿಎಸ್‌ಟಿ ಪಾವತಿ ಮಾಡಿದ ಸಂದರ್ಭದಲ್ಲಿ ದಂಡ ಮತ್ತು ಬಡ್ಡಿಯನ್ನು ವಸೂಲಿ ಮಾಡಿಲ್ಲ

ಶಿಫಾರಸುಗಳು

  • ಜಿಎಸ್‌ಟಿ ರಿಟರ್ನ್ಸ್‌ ಫೈಲಿಂಗ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು

  • ಐಟಿಸಿ ಕ್ಲೇಮುಗಳನ್ನು ಮಂಜೂರು ಮಾಡುವುದಕ್ಕೂ ಮುನ್ನ, ಮೂಲದಲ್ಲಿ ಜಿಎಸ್‌ಟಿ ಪಾವತಿ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು

  • ಐಟಿಸಿ ಕ್ಲೇಮು ಪ್ರಕರಣಗಳ ಪೈಕಿ ಮೂಲದಲ್ಲಿ ಜಿಎಸ್‌ಟಿ ಪಾವತಿ ಆಗದೇ ಇದ್ದರೆ, ವಸೂಲಿಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು

  • ಜಿಎಸ್‌ಟಿ ಪಾವತಿಯಾಗದ ಪ್ರಕರಣಗಳಲ್ಲಿ ದಂಡ ಮತ್ತು ಬಡ್ಡಿಯನ್ನು ಕಾಲಮಿತಿಯಲ್ಲಿ ಸಂಗ್ರಹಿಸಲು ಕ್ರಮ ತೆಗೆದುಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.