ADVERTISEMENT

ಬಿಜೆಪಿ ಸರ್ಕಾರದಲ್ಲಿ ಕಾಂಕ್ರೀಟ್‌ ಕ್ಯೂರಿಂಗ್‌ ಮೊದಲೇ ₹21.32 ಕೋಟಿ ಪಾವತಿ!

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 23:30 IST
Last Updated 19 ಆಗಸ್ಟ್ 2025, 23:30 IST
<div class="paragraphs"><p>ವಿಧಾನಸಭೆ</p></div>

ವಿಧಾನಸಭೆ

   

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಜೊತೆ ಒಪ್ಪಂದ ಮಾಡಿಕೊಂಡು ಕೇವಲ 1ರಿಂದ 21 ದಿನಗಳ ಅವಧಿಯಲ್ಲಿಯೇ ರಸ್ತೆ ಕಾಮಗಾರಿಯ ಕೆಲಸವನ್ನು ಅಳೆದು ₹ 21.32 ಕೋಟಿ ಪಾವತಿಸಲಾಗಿದೆ ಎಂದು ಮಹಾಲೇಖಪಾಲರ ವರದಿ (ಸಿಎಜಿ) ವರದಿ ಹೇಳಿದೆ.

2023ರ ಮಾರ್ಚ್‌ ಕೊನೆಗೊಂಡ ವರ್ಷದ ವಿವಿಧ ಇಲಾಖೆಗಳ ಕಾಮಗಾರಿಗಳ ಪರಿಶೋಧನೆ ಕುರಿತ ಭಾರತದ ಮಹಾಲೇಖಪಾಲರ ವರದಿಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ADVERTISEMENT

ಸಿ.ಸಿ ರಸ್ತೆಗಳು ಮತ್ತು ಚರಂಡಿಗಳ ನಿರ್ಮಾಣ ಮತ್ತು ಸುಧಾರಣೆಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಕಾಂಕ್ರೀಟ್‌ ಮತ್ತು ಕ್ಯೂರಿಂಗ್‌ ಮಾಡಿ, ಪರೀಕ್ಷಾ ವರದಿಯನ್ನು 28 ದಿನಗಳ ಬಳಿಕ ಸಿದ್ಧಪಡಿಸಬೇಕು. ಆದರೆ, ಲೋಕೋಪಯೋಗಿ ಇಲಾಖೆಯ ಬಳ್ಳಾರಿ ಮತ್ತು ಕೊಪ್ಪಳ ವಿಭಾಗದಲ್ಲಿ ಈ ನಿಯಮ ಉಲ್ಲಂಘಿಸಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.

‘ಲೋಕೋಪಯೋಗಿ ಇಲಾಖೆಯ ಕೋಡ್‌ (ಕೆಪಿಡಬ್ಲ್ಯುಡಿ ಕೋಡ್‌) ಪ್ರಕಾರ ಮಾರ್ಚ್‌ 15ರ ನಂತರ ಯಾವುದೇ ಕಾಮಗಾರಿಯನ್ನು ಅಳತೆ ಮಾಡಿ ಹಣ ಪಾವತಿಸಲು ಅವಕಾಶ ಇಲ್ಲ. ಆದರೆ, ಬಳ್ಳಾರಿ ಮತ್ತು ಕೊಪ್ಪಳ ವಿಭಾಗದಲ್ಲಿ 32 ಪ್ರಮುಖ ಕಾಮಗಾರಿಗಳಲ್ಲಿ ಗುತ್ತಿಗೆದಾರರ ಜೊತೆ ಶಾಮೀಲಾಗಿ ಮೊತ್ತ ಪಾವತಿಸಲಾಗಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಿ, ಹಣ ಪಾವತಿಗೆ ಕಾರಣರಾದವರ ಮೇಲೆ ಜವಾಬ್ದಾರಿಗಳನ್ನು ನಿಗದಿಪಡಿಸಬಹುದು’ ಎಂದು ವರದಿಯಲ್ಲಿದೆ.

ವಿದ್ಯುತ್‌ ಸರಬರಾಜು ಕಂಪನಿಗಳು ಮತ್ತು ಇಂಟರ್‌ನೆಟ್‌ ನೆಟ್‌ವರ್ಕ್‌ ಸೇವಾ ಪೂರೈಕೆದಾರರು ಆಪ್ಟಿಕಲ್‌ ಫೈಬರ್‌ ಕೇಬಲ್‌ ನೆಟ್‌ವರ್ಕ್‌ಗಳನ್ನು ಹಾಕಲು ಅನುಮತಿ ನೀಡುವಾಗ ಲೋಕೋಪಯೋಗಿ ಇಲಾಖೆಯ ನಾಲ್ಕು ವಿಭಾಗಗಳು ಸರ್ಕಾರ ಸೂಚಿಸಿದ ದರದಲ್ಲಿ ಸಂಗ್ರಹಿಸಬೇಕು. ಅದರ ಬದಲು ರಸ್ತೆ ಅಗೆತ ಮತ್ತು ಮತ್ತೆ ಯಥಾಸ್ಥಿತಿಗೆ ತರಲು ಶುಲ್ಕಗಳಿಗೆ ತಪ್ಪಾಗಿ ದರ ಅಳವಡಿಸಿಕೊಂಡ ಪರಿಣಾಮ ರಸ್ತೆ ಕಟ್ಟಿಂಗ್‌ ಶುಲ್ಕ ₹ 7.32 ಕೋಟಿ ಕಡಿಮೆ ವಸೂಲಿ ಮಾಡಲಾಗಿದೆ ಎಂದೂ ವರದಿ ಹೇಳಿದೆ.

ಸಣ್ಣ ನೀರಾವರಿ ಇಲಾಖೆಯಲ್ಲಿ ಟೆಂಡರ್‌ ಷರತ್ತುಗಳಿಗೆ ವ್ಯತಿರಿಕ್ತವಾಗಿ ದರ ಹೊಂದಾಣಿಕೆಯನ್ನು ಅನಿಯಮಿತವಾಗಿ ಪಾವತಿಸಿದ ಪರಿಣಾಮ ಗುತ್ತಿಗೆದಾರರಿಗೆ ₹ 18.83 ಕೋಟಿ ಅನಪೇಕ್ಷಿತ ಆರ್ಥಿಕ ಲಾಭ ಉಂಟು ಮಾಡಲಾಗಿದೆ.  ಗುತ್ತಿಗೆ ಒಪ್ಪಂದವು ಗುತ್ತಿಗೆದಾರ ಮತ್ತು ಉದ್ಯೋಗದಾತರ ನಡುವಿನ ಒಪ್ಫಂದವಾಗಿದೆ.  ಒಪ್ಪಂದ ಪ್ರಕಾರವೇ  ದರ ಪಾವತಿಸಬೇಕು. ಆದರೆ, ಹಾಸನ, ಬೆಳಗಾವಿ ಮತ್ತು ಹಳಿಯಾಳದಲ್ಲಿ ಒಪ್ಪಂದವನ್ನು ಉಲ್ಲಂಘಿಸಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಾಗಿದೆ ಎಂದೂ ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.