ADVERTISEMENT

ತಲ್ವಾರ್‌ನಿಂದ ಕೇಕ್ ಕಟ್‌: ಬಿಜೆಪಿ ಮುಖಂಡನ ಬಂಧನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 13:52 IST
Last Updated 5 ಫೆಬ್ರುವರಿ 2019, 13:52 IST
ಕೇಕ್‌ ಕತ್ತರಿಸಿದ ತಲ್ವಾರ್‌ ಪ್ರದರ್ಶಿಸಿದ ನಿಖಿಲ್‌ ಮುರಕುಟೆ (ಬಿಳಿ ಅಂಗಿ, ಹಣೆಗೆ ಕುಂಕುಮ ಇಟ್ಟಿರುವವ)
ಕೇಕ್‌ ಕತ್ತರಿಸಿದ ತಲ್ವಾರ್‌ ಪ್ರದರ್ಶಿಸಿದ ನಿಖಿಲ್‌ ಮುರಕುಟೆ (ಬಿಳಿ ಅಂಗಿ, ಹಣೆಗೆ ಕುಂಕುಮ ಇಟ್ಟಿರುವವ)   

ಬೆಳಗಾವಿ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ನಿಖಿಲ್ ರವಿ ಮುರಕುಟೆ ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಗಾಂಧಿನಗರದಲ್ಲಿ ಫೆ. 1ರಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅವರು ತಲ್ವಾರ್‌ನಿಂದ ಕೇಕ್‌ ಕತ್ತರಿಸಿದ್ದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಪೊಲೀಸರು ಅವರನ್ನು ಬಂಧಿಸಿ, ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಉತ್ತರ ಕ್ಷೇತ್ರದ ಶಾಸಕ, ಬಿಜೆಪಿಯ ಅನಿಲ್ ಬೆನಕೆ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ನಿಖಿಲ್ ವಿರುದ್ಧ ಮಾತ್ರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ನಿಖಿಲ್ ರೌಡಿಶೀಟರ್ ಆಗಿದ್ದು, ಅವರ ವಿರುದ್ಧ 8 ಪ್ರಕರಣಗಳಿವೆ. ಅವರನ್ನು ಗಡಿಪಾರು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ. ಹುಟ್ಟುಹಬ್ಬ ಆಚರಿಸುವಾಗ ಸಾರ್ವಜನಿಕವಾಗಿ ತಲ್ವಾರ್‌ ಪ್ರದರ್ಶಿಸಿ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ ಆರೋಪ ಅವರ ಮೇಲಿದೆ. 10 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಡಿಸಿಪಿ ಸೀಮಾ ಲಾಟ್ಕರ್‌ ಅವರು ಆದೇಶ ನೀಡಿದ್ದಾರೆ. ಆರೋಪಿಯನ್ನು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ’ ಎಂದು ಇನ್‌ಸ್ಪೆಕ್ಟರ್‌ ಬಿ.ಆರ್‌. ಗಡ್ಡೇಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.