ADVERTISEMENT

ಎದುರಾಳಿ ಸರಿಸಮನಾಗಿದ್ದರೆ ಯುದ್ಧ ಮಾಡಬಹುದು: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 20:22 IST
Last Updated 22 ಅಕ್ಟೋಬರ್ 2020, 20:22 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌   

ಬೆಂಗಳೂರು: ‘ಎದುರಾಳಿ ಸರಿಸಮನಾಗಿದ್ದರೆ ಯುದ್ಧ ಮಾಡಬಹುದು. ಇಲ್ಲದೇ ಇದ್ದರೆ ಯುದ್ಧ ಮಾಡಲು ಆಗಲ್ಲ’ ಎಂದು ಹೇಳುವ ಮೂಲಕ ಆರ್‌.ಆರ್‌. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಸವಾಲೇ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪರೋಕ್ಷವಾಗಿ ಹೇಳಿದರು.

ಕುಂದಗೋಳದ ಮಾಜಿ ಶಾಸಕ ಜೆಡಿಎಸ್‌ನ ಮಲ್ಲಿಕಾರ್ಜುನ ಎಸ್. ಅಕ್ಕಿ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಗುರುವಾರ ಸೇರಿಸಿಕೊಂಡ ಬಳಿಕ ಮಾತನಾಡಿದ ಅವರು, ‘ಆರ್.ಆರ್. ನಗರದಲ್ಲಿ ಮಾರಾಮಾರಿ ರಾಜಕಾರಣ ನಡೆಯುತ್ತಿದೆ. ಹೆಣಗಳು ಬೀಳುತ್ತವೆ. ಹೀಗಾಗಿ, ಪ್ಯಾರಾ ಮಿಲಿಟರಿ ರಕ್ಷಣೆ ನೀಡಬೇಕು ಎಂದು ಪತ್ರ ಬರೆಯುವುದಾಗಿ ಮಾಜಿ ಶಾಸಕರು ಹೇಳಿಕೆ ನೀಡಿದ್ದಾರೆ. ಅವರು ಈ ಹಿಂದೆಯೇ ಪತ್ರ ಬರೆಯಬೇಕಿತ್ತು. ಮುಖ್ಯಮಂತ್ರಿಯಿಂದಲೊ, ಪಕ್ಷದ ಅಧ್ಯಕ್ಷರಿಂದಲೊ ಆ ಪತ್ರ ಬರೆಸಿದ್ದಾರೆ ಉತ್ತಮವಾಗಿರುತ್ತಿತ್ತು’ ಎಂದೂ ಕುಟುಕಿದರು.

‘ಮಾರಾಮಾರಿ ರಾಜಕಾರಣ ಮಾಡುವಂಥ ಸಂಸ್ಕೃತಿ ಇರುವವರನ್ನು ನಾವು ಬೆಳೆಸಿದೆವಲ್ಲ ಏನು ಮಾಡುವುದು? ಈಗ ಪಶ್ಚಾತ್ತಾಪ ಪಡಬೇಕಾಗಿದೆ’ ಎಂದೂ ಹೇಳಿದರು.

ADVERTISEMENT

ಆಶ್ವಾಸನೆಯ ಸರ್ಕಾರ: ‘ರಾಜ್ಯದ ಬಿಜೆಪಿ ಸರ್ಕಾರ ಘೋಷಣೆ, ಆಶ್ವಾಸನೆ ನೀಡುತ್ತಿದೆಯೇ ಹೊರತು, ಅವುಗಳನ್ನು ಈಡೇರಿಸುತ್ತಿಲ್ಲ. ಕಳೆದ ವರ್ಷ ಪ್ರವಾಹದಿಂದ ₹ 35 ಸಾವಿರ ಕೋಟಿ ನಷ್ಟವಾಗಿದೆ ಎಂದಿದ್ದರು. ಕೇಂದ್ರ ಸರ್ಕಾರ ಕೇವಲ ₹ 1,800 ಕೋಟಿ ಕೊಟ್ಟಿತ್ತು. ಆದರೆ, ಪರಿಹಾರ ಮೊತ್ತ ಜನರಿಗೆ ಸೇರಿಲ್ಲ. ಕೊರೊನಾ ಸಮಯದಲ್ಲಿ ಘೋಷಿಸಿದ್ದ ಪರಿಹಾರ ಹಣ ಕೂಡಾ ರೈತರಿಗೆ, ಕಾರ್ಮಿಕರಿಗೆ, ಶ್ರಮಿಕರಿಗೆ ತಲುಪಿಲ್ಲ’ ಎಂದೂ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.