ADVERTISEMENT

ಕ್ಯಾನ್ಸರ್ | 36 ಲಕ್ಷ ಮಹಿಳೆಯರಿಗೆ ತಪಾಸಣೆ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 15:10 IST
Last Updated 9 ಫೆಬ್ರುವರಿ 2024, 15:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಕ್ಯಾನ್ಸರ್ ಪತ್ತೆಗೆ ಸಂಬಂಧಿಸಿದಂತೆ ಕಳೆದ ಆರು ತಿಂಗಳಲ್ಲಿ 36 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ತಪಾಸಣೆ ನಡೆಸಲಾಗಿದೆ. 2,023 ಮಹಿಳೆಯರಲ್ಲಿ ಕ್ಯಾನ್ಸರ್‌ನ ಪ್ರಾರಂಭಿಕ ಲಕ್ಷಣಗಳು ಪತ್ತೆಯಾಗಿವೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

‘ರಾಜ್ಯದಲ್ಲಿ ಕಾನ್ಸರ್ ಸಂಬಂಧಿತ ಸಮಸ್ಯೆಗಳು ಹೆಚ್ಚಾಗದಂತೆ ನಿಗಾ ವಹಿಸಲು ಹಾಗೂ ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ಪತ್ತೆಹಚ್ಚಿ, ಚಿಕಿತ್ಸೆಗೆ ಆದ್ಯತೆ ನೀಡಲು ಕ್ಯಾನ್ಸರ್‌ ಕೇರ್‌ ಟಾಸ್ಕ್‌ಪೋರ್ಸ್ ರಚಿಸಲಾಗಿದೆ. ರಾಜ್ಯದಾದ್ಯಂತ ಕ್ಯಾನ್ಸರ್‌ ತಪಾಸಣೆಗೆ ವೇಗ ನೀಡಲಾಗಿದೆ. ಮಹಿಳೆಯರಲ್ಲಿ ಹೆಚ್ಚಾಗಿ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್‌ ಪತ್ತೆಯಾಗುತ್ತಿದೆ. ತಪಾಸಣೆ ವೇಳೆ ಕಾನ್ಸರ್ ದೃಢಪಟ್ಟವರಲ್ಲಿ 532 ಮಹಿಳೆಯರು ಸರ್ಕಾರದ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹೇಳಿದ್ದಾರೆ.  

ADVERTISEMENT

‘ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ 19.34 ಲಕ್ಷ ಮಹಿಳೆಯರಿಗೆ ತಪಾಸಣೆ ನಡೆಸಲಾಗಿದೆ. ಅವರಲ್ಲಿ 890 ಮಂದಿಯಲ್ಲಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ದೃಢಪಟ್ಟಿವೆ. ಗರ್ಭಕಂಠ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ 16.84 ಲಕ್ಷ ಮಹಿಳೆಯರಿಗೆ ತಪಾಸಣೆ ಮಾಡಲಾಗಿದೆ. ಅವರಲ್ಲಿ 1,133 ಮಂದಿಯಲ್ಲಿ ಈ ಮಾದರಿಯ ಕ್ಯಾನ್ಸರ್ ಖಚಿತಪಟ್ಟಿದೆ’ ಎಂದು ತಿಳಿಸಿದ್ದಾರೆ.

‘ಪ್ರಾಥಮಿಕ ಹಂತದಲ್ಲೇ ಕಾನ್ಸರ್ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಮೂಲಕ ರೋಗವನ್ನು ಗುಣಪಡಿಸಬಹುದಾಗಿದೆ. ಕಾನ್ಸರ್ ಲಕ್ಷಣ ಪತ್ತೆಯಾದವರಿಗೆ ಚಿಕಿತ್ಸೆಗೆ ಕ್ರಮವಹಿಸಲಾಗಿದೆ. ಕ್ಯಾನ್ಸರ್ ರೋಗಿಗಳ ಬೆನ್ನೆಲುಬಾಗಿ ಆರೋಗ್ಯ ಇಲಾಖೆ ನಿಂತಿದೆ’ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.