ADVERTISEMENT

‘ದತ್ತ ಭಕ್ತ’ರ ವಿರುದ್ಧ ಪ್ರಕರಣ: ಸಿಎಂ–ವಿಜಯೇಂದ್ರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 0:27 IST
Last Updated 5 ಜನವರಿ 2024, 0:27 IST
   

ಬೆಂಗಳೂರು: ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಬಂಧನ ವಿವಾದದ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ‘ದತ್ತಪೀಠದ ಹೋರಾಟಗಾರರ ವಿರುದ್ಧದ ಹಳೆಯ ಪ್ರಕರಣಗಳಿಗೆ ಮರು ಜೀವ ನೀಡಲಾಗುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ. ‘ಅದು ಸಂಪೂರ್ಣ ಸುಳ್ಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 

–––––––––––––––––––

ವಿಜಯೇಂದ್ರ ಆರೋಪ

ADVERTISEMENT

‘ಏಳು ವರ್ಷಗಳ ಹಳೆಯ ದತ್ತಪೀಠ ಪ್ರಕರಣವನ್ನು ಮರು ತನಿಖೆ ಮಾಡಿಸಿ ದತ್ತಾತ್ರೇಯ ಭಕ್ತರ ವಿರುದ್ಧವೂ ಕಾಂಗ್ರೆಸ್‌ ಷಡ್ಯಂತ್ರ ರೂಪಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.

‘ಎಕ್ಸ್‌’ ಮೂಲಕ ಟ್ವೀಟ್‌ ಮಾಡಿರುವ ಅವರು, ‘ದತ್ತಪೀಠದ ಹೋರಾಟಗಾರರನ್ನು ಬೆನ್ನು ಹತ್ತಲು ಪೊಲೀಸರಿಗೆ ಸೂಚಿಸಿದ್ದೀರಿ. ನೀವೆಷ್ಟೇ ಭಯ ಹುಟ್ಟಿಸಿದರೂ ರಾಮಭಕ್ತರ ಅಯೋಧ್ಯೆ ಭೇಟಿಯ ಸಂಖ್ಯೆ ಕ್ಷೀಣಿಸಲು ಸಾಧ್ಯವಾಗದು. ಬದಲಿಗೆ ಅದು ವಿಸ್ತಾರಗೊಳ್ಳುತ್ತಲೇ ಇರುತ್ತದೆ’ ಎಂದು ಹೇಳಿದ್ದಾರೆ.

‘ನಿಮ್ಮ ಹಿಂದೂ ದ್ವೇಷದ ಬೆಟ್ಟ ನಿಮಗೆಷ್ಟು ಬೇಕೋ ಅಗೆಯಿರಿ. ಇನ್ನಷ್ಟು ಆಳಕ್ಕೂ ಇಳಿದು ಬಗೆಯಿರಿ, ನಿಮಗೇನೂ ದಕ್ಕದು. ಹಿಂದೂ ಕಾರ್ಯಕರ್ತರ ಒಂದೇ ಒಂದು ರೋಮವನ್ನೂ ಕೊಂಕಿಸಲು ಸಾಧ್ಯವಾಗದು. ಹನುಮನ ಸುಡಲು ಹೋಗಿ ಲಂಕೆಗೆ ಬೆಂಕಿ ಹಚ್ಚಿಸಿಕೊಂಡ ರಾವಣನ ಸ್ಥಿತಿಗೆ ನಿಮ್ಮ ಸರ್ಕಾರ ತಲುಪುತ್ತಿದೆ’ ಎಂದಿದ್ದಾರೆ.

––––––––––––––

ಸಂಪೂರ್ಣ ಸುಳ್ಳು ಸುದ್ದಿ: ಸಿದ್ದರಾಮಯ್ಯ

‘ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಾಬಾಬುಡನ್‌ಗಿರಿಯಲ್ಲಿ ಗೋರಿ ಧ್ವಂಸ ಪ್ರಕರಣವನ್ನು ರೀಓಪನ್‌ ಮಾಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗಿದ್ದು, ಇದು ತಪ್ಪು ಮಾಹಿತಿ ಮತ್ತು ಸಂಪೂರ್ಣ ಸುಳ್ಳು ಸುದ್ದಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ  ಹೇಳಿದ್ದಾರೆ.

‘2017 ರಲ್ಲಿ ಪ್ರಕರಣ ದಾಖಲಾಗಿತ್ತಲ್ಲದೇ, ತನಿಖಾಧಿಕಾರಿ ವರದಿ ಸಲ್ಲಿಸಿದ್ದರು. ಇದಕ್ಕೆ  ಸಂಬಂಧಿಸಿದಂತೆ 2020 ರ ಮಾರ್ಚ್‌ 19 ರಂದು ವಿಚಾರಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರ ಆಧಾರದಲ್ಲಿ 2023 ರ ಸೆಪ್ಟೆಂಬರ್‌ 7 ರಂದು ಸರ್ಕಾರ ಅನುಮತಿ ನೀಡಿತ್ತು. 2023 ರ ಅಕ್ಟೋಬರ್‌ 24 ರಂದು ಆರೋ‍ಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಜ.8 ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದ ಸಮನ್ಸ್‌ ಜಾರಿ ಆಗಿದೆ. ಇದು ಸಹಜ ಕಾನೂನು ಪ್ರಕ್ರಿಯೆ, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ’ ಎಂದಿದ್ದಾರೆ.

‘ರಾಜ್ಯ ಸರ್ಕಾರ ಪ್ರಕರಣದ ಮರು ತನಿಖೆಗೆ ಮುಂದಾಗಿದೆ ಎಂದು ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿ, ಪ್ರಚೋದನೆ ನೀಡುವ ಕೆಲಸ ಮಾಡಬಾರದು. ಇಂತಹ ಸುಳ್ಳು ಸುದ್ದಿ ಪ್ರಸಾರದಿಂದ ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತವೆ. ಜೊತೆಗೆ ಕಾನೂನು ಸುವ್ಯವಸ್ಥೆ ಕೂಡ ಹದಗೆಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.