ದಾವಣಗೆರೆ: ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಸೋಮವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೊಶ ವ್ಯಕ್ತಪಡಿಸಿದರು. ಪ್ರಕರಣವನ್ನು ಕೂಡಲೇ ರದ್ಧಪಡಿಸಬೇಕು ಎಂದು ಒತ್ತಾಯಿಸಿದರು.
ನಗರದ ಕೆಇಬಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮೆರವಣಿಗೆ ಹೊರಟರು. ಹದಡಿ ರಸ್ತೆ, ವಿದ್ಯಾರ್ಥಿ ಭವನ ವೃತ್ತದ ಮೂಲಕ ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಠಾಣೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ತಡೆದರು.
ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಠಾಣೆಗೆ ತೆರಳಿದ ಬಿಜೆಪಿ ನಿಯೋಗ ಪ್ರಕರಣ ರದ್ದುಪಡಿಸಲು ಒತ್ತಾಯಿಸಿತು. ಶಾಸಕರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಸಾಕ್ಷ್ಯ ಏನಿದೆ ಎಂದು ಮುಖಂಡರು ಪ್ರಶ್ನಿಸಿದರು. ಡಿವೈಎಸ್‌ಪಿ ಬಿ.ಎಸ್. ಬಸವರಾಜ್ ಹಾಗೂ ಶರಣ ಬಸವೇಶ್ವರ ಅವರೊಂದಿಗೆ ಏರು ಧ್ವನಿಯಲ್ಲಿ ಚರ್ಚೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು.
‘ಶಾಸಕರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಾತಿ ನಿಂದನೆ ಪ್ರಕರಣ ಸಿಆರ್‌ಇಸಿ ಠಾಣೆ ವ್ಯಾಪ್ತಿಗೆ ಬರುತ್ತದೆ. ಇದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ವ್ಯಾಪ್ತಿಗೆ ಬರುವುದಿಲ್ಲ. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಡಿವೈಎಸ್‌ಪಿ ಬಸವರಾಜ್ ಅವರು ಬಿಜೆಪಿ ನಿಯೋಗಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ಇದರಿಂದ ಆಕ್ರೋಶಗೊಂಡ ಶಾಸಕ ಬಿ.ಪಿ.ಹರೀಶ್, ‘ಮಣ್ಣು ಅಕ್ರಮ ಸಾಗಣೆ ಮಾಡಿದ ಸ್ಥಳ ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಬರುತ್ತದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ದಾಖಲೆ ಸಮೇತ ದೂರು ನೀಡಿದರೂ ಪ್ರಕರಣ ದಾಖಲು ಮಾಡಿಲ್ಲ. ನನ್ನ ವಿರುದ್ಧ ಜಾತಿ ನಿಂದನೆ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ. ಇದಕ್ಕೆ ಸಾಕ್ಷ್ಯ ಏನಿದೆ’ ಎಂದು ಪ್ರಶ್ನಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಣ್ಣು ಅಕ್ರಮ ಸಾಗಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳಿವೆ. ಇದನ್ನು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಕಾನೂನು ಕ್ರಮ ಕೈಗೊಂಡಿಲ್ಲ. ಇದಕ್ಕೆ ಪೊಲೀಸ್ ಇಲಾಖೆಯ ಉತ್ತರ ಪಡೆಯದೇ ತೆರಳುವುದಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬರಬೇಕು’ ಎಂದು ಪಟ್ಟುಹಿಡಿದರು.
ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ‘ಶಾಸಕರ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲು ಮಾಡಿರುವುದನ್ನು ಇಲ್ಲಿಗೆ ಬಿಡುವುದಿಲ್ಲ. ಇದನ್ನು ವಿಧಾನಸೌಧದಲ್ಲಿ ಕೂಡ ಪ್ರಶ್ನೆ ಮಾಡುತ್ತೇವೆ. ಆದರೆ, ಮಣ್ಣು ಅಕ್ರಮ ಗಣಿಗಾರಿಕೆ, ಸಾಗಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಲೇಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ಬಳಿಕವೂ ಮಣ್ಣು ಅಕ್ರಮ ಸಾಗಣೆ ಮುಂದುವರಿದಿದೆ. ಲಾರಿ, ಜೆಸಿಬಿ ವಶಕ್ಕೆ ಪಡೆದಿಲ್ಲ. ಸರ್ಕಾರಿ ಆಸ್ತಿ ತಮ್ಮ ಸ್ವಂತದ್ದು ಎಂಬಂತೆ ವರ್ತಿಸುತ್ತಿದ್ದಾರೆ. ಡಿಸಿ ಮತ್ತು ಎಸ್‌ಪಿಯೇ ಮೊದಲ ಕಳ್ಳರು. ಸಚಿವರೇ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧವೂ ಪ್ರಕರಣ ದಾಖಲು ಮಾಡಬೇಕು’ ಎಂದು ಶಾಸಕ ಬಿ.ಪಿ.ಹರೀಶ್ ಆಗ್ರಹಿಸಿದರು.
‘ಸಾರ್ವಜನಿಕರು ನೀಡಿದ ದೂರು ಆಧರಿಸಿ ಶಾಸಕರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲನೆ ಮಾಡಲಾಗುತ್ತದೆ. ಮಣ್ಣು ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಜ.12ರಂದು ನೀಡಿದ ದೂರು ಆಧರಿಸಿ ಮತ್ತೊಂದು ದೂರು ಪ್ರತ್ಯೇಕವಾಗಿ ದಾಖಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ಸಚಿವರ ವಿರುದ್ಧ ಒಗ್ಗೂಡಿದ ಬಿಜೆಪಿ
ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಮಣ್ಣು ಅಕ್ರಮ ಗಣಿಗಾರಿಕೆ ಹಾಗೂ ಸಾಗಣೆ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು, ವೈಮನಸು ಮರೆತು ಒಗ್ಗೂಡಿ ಹೋರಾಟ ನಡೆಸುತ್ತಿದ್ದಾರೆ.
ಜಿ.ಎಂ. ಸಿದ್ದೇಶ್ವರ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಧರಣಿ ನಡೆಸಿದರು. ಪೊಲೀಸ್ ಠಾಣೆಗೆ ತೆರಳಿದ ನಿಯೋಗದಲ್ಲಿ ಕೂಡ ಎರಡೂ ಬಣಗಳ ಸದಸ್ಯರು ಇದ್ದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಅಂತರ ಕಾಯ್ದುಕೊಂಡರು.
ನಾನು ಒಬ್ಬ ಶಾಸಕ. ನನ್ನ ವಿರುದ್ಧ ಪ್ರಕರಣ ದಾಖಲು ಮಾಡಲು ತೋರುವ ಉತ್ಸುಕತೆಯನ್ನು ಮಣ್ಣು ಅಕ್ರಮ ಸಾಗಣೆದಾರರ ವಿರುದ್ಧ ಏಕೆ ತೋರುತ್ತಿಲ್ಲ? ಮಣ್ಣು ಸಾಗಣೆ ಮಾಡಿದ ವಾಹನಗಳನ್ನು ಏಕೆ ಬಿಡುಗಡೆ ಮಾಡಿದ್ದೀರಿ?ಬಿ.ಪಿ.ಹರೀಶ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.