ADVERTISEMENT

Covid-19 Karnataka Update: ಪ್ರಕರಣಗಳು ಕಡಿಮೆ; ಇಳಿಯುತ್ತಿಲ್ಲ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 15:19 IST
Last Updated 3 ಜೂನ್ 2021, 15:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರಲ್ಲಿ ಮತ್ತೆ 514 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಈವರೆಗೆ ಕೋವಿಡ್‌ಗೆ ಮೃತಪಟ್ಟವರ ಒಟ್ಟು ಸಂಖ್ಯೆ 30,531 ಆಗಿದೆ.

ರಾಜ್ಯದಲ್ಲಿ ಕಳೆದ ವರ್ಷ ಮಾ.10ರಂದು ಮೊದಲ ಮರಣ ಪ್ರಕರಣ ವರದಿಯಾಗಿತ್ತು. ಡಿಸೆಂಬರ್ ಅಂತ್ಯಕ್ಕೆ ಮರಣ ಪ್ರಮಾಣವು ಶೇ 0.94ರಷ್ಟಿತ್ತು. ಆ ವೇಳೆಗೆ 12,090 ಮಂದಿ ಮೃತಪಟ್ಟಿದ್ದರು. ಎರಡನೇ ಅಲೆಯಲ್ಲಿ ಸೋಂಕಿತರ ಜತೆಗೆ ಕಾಯಿಲೆಯ ತೀವ್ರತೆಗೆ ಮೃತಪಡುವವರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಈ ವರ್ಷ 5 ತಿಂಗಳಲ್ಲಿಯೇ 17 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ಮರಣ ಪ್ರಮಾಣ ದರ ಶೇ 2.82ರಷ್ಟಿದೆ.

ಸೋಂಕು ದೃಢ ಪ್ರಮಾಣವು ಶೇ 12.20ಕ್ಕೆ ಇಳಿಕೆಯಾಗಿದೆ. ಆದರೆ, ಮಣರ ಪ್ರಮಾಣ ದರ ಶೇ 3ರ ಗಡಿಯ (ಶೇ 2.80) ಆಸುಪಾಸಿನಲ್ಲಿಯೇ ಇದೆ. ಹೊಸದಾಗಿ ದೃಢಪಟ್ಟ ಕೋವಿಡ್ ಮರಣ ಪ್ರಕರಣಗಳಲ್ಲಿ ಸುಮಾರು ಅರ್ಧದಷ್ಟು ಮಂದಿ 50 ವರ್ಷದೊಳಗಿನವರಾಗಿದ್ದಾರೆ. ಮೃತರು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಎದುರಿಸಿದ್ದಾರೆ. ಈ ತಿಂಗಳ ಮೂರು ದಿನಗಳ ಅವಧಿಯಲ್ಲಿ 1,441 ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 30,531ಕ್ಕೆ ಏರಿಕೆಯಾಗಿದೆ.

ಕೋವಿಡ್ ಪೀಡಿತರಲ್ಲಿ ಮತ್ತೆ 24,036 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಚೇತರಿಕೆ ಹೊಂದಿದವರ ಸಂಖ್ಯೆ 23.36 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, 2.86 ಲಕ್ಷ ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈವರೆಗೆ ಕೋವಿಡ್ ಪೀಡಿತರಾದವರ ಸಂಖ್ಯೆ 26.53 ಲಕ್ಷ ದಾಟಿದೆ.

ಯಾದಗಿರಿ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಮತ್ತೆ 347 ಮಂದಿ ಮೃತಪಟ್ಟಿದ್ದಾರೆ. ಹಾಸನ ಹಾಗೂ ಮಂಡ್ಯದಲ್ಲಿ ತಲಾ 14 ಮಂದಿ, ಮೈಸೂರಿನಲ್ಲಿ 12 ಮಂದಿ, ಉತ್ತರ ಕನ್ನಡ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ 11 ಮಂದಿ, ಕೊಪ್ಪಳ, ಚಾಮರಾಜನಗರ ಹಾಗೂ ಬೆಳಗಾವಿಯಲ್ಲಿ ತಲಾ 10 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 3,533 ಮಂದಿ ಕೋವಿಡ್ ಪೀಡಿತರಾಗಿರುವುದು ಖಚಿತಪಟ್ಟಿದೆ. ಹಾಸನ (2,078), ಮೈಸೂರು (1,573) ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ. 15 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ 500ಕ್ಕಿಂತ ಕಡಮೆ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.