ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ’ (ಜಾತಿ ಗಣತಿ) ವರದಿ ಸಿದ್ಧಗೊಂಡು ವರ್ಷ ಕಳೆದರೂ ಅದನ್ನು ಸ್ವೀಕರಿಸಲು ರಾಜ್ಯದ ಸಮ್ಮಿಶ್ರ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ರಾಜ್ಯದಲ್ಲಿ ವಿವಿಧ ಸಮುದಾಯದವರ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ, ಸರ್ಕಾರದ ಸೌಲಭ್ಯಗಳು ಎಷ್ಟರಮಟ್ಟಿಗೆ ತಲುಪಿವೆ, ಉದ್ಯೋಗದ ಸ್ಥಿತಿ ಏನು ಎಂಬ ಬಗ್ಗೆ ಅಧ್ಯಯನ ನಡೆಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಇಂತಹ ಸಮೀಕ್ಷೆ ನಡೆಸಿತ್ತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವರದಿಯನ್ನೂ ಸಿದ್ಧಪಡಿಸಿದೆ. ವರದಿ ತಯಾರಿಗೆ₹ 158.47 ಕೋಟಿ ವೆಚ್ಚವೂ ಆಗಿದೆ.
ವರದಿ ಸ್ವೀಕರಿಸುವ ಸಂಬಂಧ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು 3–4 ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ವರದಿ ಸ್ವೀಕರಿಸಿದರೆ ಅದನ್ನು ಬಿಡುಗಡೆ ಮಾಡು
ವಂತೆ ರಾಜಕೀಯ ಪಕ್ಷಗಳು ಮತ್ತು ಜಾತಿ ಸಂಘಟನೆಗಳಿಂದ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ರಾಜ್ಯ ಮುಖ್ಯ ಕಾರ್ಯದರ್ಶಿ (ಸಿ.ಎಸ್) ಟಿ.ಎಂ. ವಿಜಯಭಾಸ್ಕರ್ ಅವರನ್ನು ಭೇಟಿ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಂಬಂಧ ಚರ್ಚಿಸಲು ಆಯೋಗ ನಿರ್ಧರಿಸಿದೆ.
ಮುನ್ನೆಲೆಗೆ ಬಂದ ವರದಿ: ಮೀಸಲಾತಿ ಪ್ರಮಾಣ ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಪರಿಶಿಷ್ಟ ಪಂಗಡ
ವರು ಬೃಹತ್ ಸಂಖ್ಯೆಯಲ್ಲಿ ಬೀದಿಗಿಳಿದ ಬೆನ್ನಲ್ಲೆ ಈ ವರದಿ ಕುರಿತ ಚರ್ಚೆಯೂ ಮುನ್ನೆಲೆಗೆ ಬಂದಿದೆ. ಪರಿಶಿಷ್ಟರಿಗೆ ಮೀಸಲಾತಿ ನಿರ್ಣಯಿ
ಸುವ ವಿಷಯದಲ್ಲಿ ಪರಿಶಿಷ್ಟ ಜಾತಿ (ಎಸ್.ಸಿ), ಪರಿಶಿಷ್ಟ ಪಂಗಡ (ಎಸ್.ಟಿ) ಆಯೋಗ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡ
ಬೇಕಿದೆ. ಆದರೆ, ಮೀಸಲಾತಿ ನಿರ್ಣಯಕ್ಕೆ ಜನಸಂಖ್ಯೆ ಮಾನದಂಡ ಆಗಿರುವುದರಿಂದ ಪರಿಶಿಷ್ಟ ಪಂಗಡದ ಜನರು ಕೇಳುತ್ತಿರುವ ಮೀಸಲಾತಿ ಪ್ರಮಾಣಕ್ಕೂ, ರಾಜ್ಯದಲ್ಲಿರುವ ಈ ಸಮುದಾಯದ ಜನರ ಸಂಖ್ಯೆಗೂ ತಾಳೆಯಾಗುತ್ತಿದೆಯೇ ಎಂಬುದನ್ನೂ ಆಯೋಗ ಪರಿಶೀಲಿಸಬೇಕಿದೆ.
‘ಮೀಸಲಾತಿ ನಿರ್ಣಯಿಸಲು ಆಯೋಗ ಸಿದ್ಧಪಡಿಸಿದ ವರದಿಯಲ್ಲಿರುವ ಅಂಕಿ ಅಂಶಗಳು ಮುಖ್ಯವಾಗುತ್ತದೆ. ಅಲ್ಲದೆ, ಅನಿವಾರ್ಯವೂ ಆಗುತ್ತದೆ. ಆದರೆ, ಸರ್ಕಾರ ಇನ್ನೂ ವರದಿಯನ್ನು ಸ್ವೀಕರಿಸದೇ ಇರುವುದರಿಂದ ಅದರಲ್ಲಿರುವ ಅಂಕಿ ಅಂಶಗಳನ್ನು ಅಗತ್ಯಕ್ಕೆ ಬಳಸಿ
ಕೊಳ್ಳಲು ಅಥವಾ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.
ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಈಗಾಗಲೇ 3–4 ಬಾರಿ ಮುಖ್ಯಮಂತ್ರಿಯನ್ನು ಸಂಪರ್ಕಿಸಿ ವರದಿ ಅಂತಿಮಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗ ಶೆಟ್ಟಿ ಅವರ ಜೊತೆಗೂ ಚರ್ಚೆ ನಡೆಸಿದ್ದಾರೆ. ಆದರೆ, ವರದಿ ಸ್ವೀಕರಿಸುವ ಬಗ್ಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ಹೇಳಿವೆ.
ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿರುವ ಜಾತಿಗಳ ಒಳ ವರ್ಗೀಕರಣಕ್ಕೆ, ಕೇಂದ್ರ ಸರ್ಕಾರ ರೋಹಿಣಿ ಕಮಿಷನ್ ರಚಿಸಿದೆ. ಈ ಕಮಿಷನ್‌ಗೂ ರಾಜ್ಯದಲ್ಲಿರುವ ಹಿಂದುಳಿದ ಜಾತಿಗಳ ಅಂಕಿಅಂಶ ಅಗತ್ಯವಾಗಿದೆ.
ಸದ್ಯ, 1931ರ ಜಾತಿ ಅಂಕಿ ಅಂಶಗಳ ಲಭ್ಯವಿದ್ದು, ಅದನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಉದ್ದೇಶಕ್ಕೆ ಬಳಸುವ ಅಂಕಿ ಅಂಶಗಳು, ದತ್ತಾಂಶಗಳು ಕನಿಷ್ಠ 10 ವರ್ಷ ಒಳಗಿನದ್ದಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಕೂಡಾ ಸ್ಪಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ವರದಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ ಎಂದು ಮೂಲಗಳು ವಿವರಿಸಿವೆ.
***
ವರದಿ ಸಿದ್ಧಗೊಂಡಿರುವ ಬಗ್ಗೆ ಹಿಂದುಳಿದ ಆಯೋಗದಿಂದ ಪತ್ರ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗೆ ನಾನು ಪತ್ರ ಬರೆದಿದ್ದೇನೆ. ಅವರು ತೀರ್ಮಾನ ತೆಗೆದುಕೊಳ್ಳಬೇಕು
-ಸಿ. ಪುಟ್ಟರಂಗ ಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ
***
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಸಿದ್ಧವಾಗಿದೆ. ವರದಿ ಸ್ವೀಕರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ
ಎಚ್. ಕಾಂತರಾಜ, ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.