ADVERTISEMENT

Caste Census: ಕೈಕೊಟ್ಟ ಆ್ಯಪ್, ಸಮೀಕ್ಷೆಗೆ ತೊಡಕು

ಮೊದಲ ದಿನ ಹಲವು ವಿಘ್ನ, ಕಾಡಿದ ಸರ್ವರ್ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 0:30 IST
Last Updated 23 ಸೆಪ್ಟೆಂಬರ್ 2025, 0:30 IST
<div class="paragraphs"><p>ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿತರಾಗಿರುವ ಸಮೀಕ್ಷಕರು ಕಲಬುರಗಿಯ ಸುಂದರ ನಗರದಲ್ಲಿ ಸೋಮವಾರ ಮನೆ–ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದರು &nbsp;&nbsp;<br></p></div>

ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿತರಾಗಿರುವ ಸಮೀಕ್ಷಕರು ಕಲಬುರಗಿಯ ಸುಂದರ ನಗರದಲ್ಲಿ ಸೋಮವಾರ ಮನೆ–ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದರು   

   

ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌

ADVERTISEMENT

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೋಮವಾರ ಆರಂಭ ಆಗಿದ್ದು, ಪ್ರಕ್ರಿಯೆಗೆ ಮೊದಲ ದಿನವೇ ಸಮಸ್ಯೆಗಳು ಎದುರಾಗಿವೆ. ಸಮೀಕ್ಷೆಗೆ ರೂಪಿಸಿದ್ದ ಆ್ಯಪ್‌ನ ತಾಂತ್ರಿಕ ದೋಷ, ಸಮೀಕ್ಷಕರನ್ನು ತಲುಪದ ಕೈಪಿಡಿ, ಸರ್ವರ್ ಸಮಸ್ಯೆಗಳು ಕಾಡಿವೆ.

ಈ ಸಮಸ್ಯೆಗಳಿಂದಾಗಿ ಬಹುತೇಕ ಜಿಲ್ಲೆಗಳಲ್ಲಿ ಮೊದಲ ದಿನ ಸಮೀಕ್ಷೆಯೇ ಆರಂಭವಾಗಲಿಲ್ಲ. ಕೆಲವೆಡೆ ವಿಳಂಬವಾಗಿ ಆರಂಭವಾಗಿದೆ. ಒಂದೆರಡು ಜಿಲ್ಲೆಗಳಲ್ಲಿ ಮಧ್ಯಾಹ್ನ ಆರಂಭವಾಗಿದ್ದು, ನಿಗದಿಯಂತೆ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಆ್ಯಪ್‌ ಅಪ್‌ಡೇಟ್‌ ಆಗದಿರುವುದೇ ಪ್ರಮುಖ ತೊಡಕಾಯಿತು. ಸರ್ವರ್‌ ಸಮಸ್ಯೆ ಸಮಸ್ಯೆಯನ್ನು ಸಂಕೀರ್ಣ ಗೊಳಿಸಿತು. ಸಮೀಕ್ಷಕರು ಮಧ್ಯಾಹ್ನದವರೆಗೂ ಅಪ್‌ಡೇಟ್‌ಗಾಗಿ ಕಸರತ್ತು ನಡೆಸಿ ಮನೆಗೆ ಮರಳಿದ್ದಾರೆ.

‘ಕಲ್ಯಾಣ’ದಲ್ಲಿ ಹತ್ತಾರು ಅಡ್ಡಿ (ಕಲಬುರಗಿ):

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮೊದಲ ದಿನ ಹತ್ತಾರು ಸಮಸ್ಯೆಗಳು ಎದುರಾದವು. ಬಹುತೇಕ ಕಡೆ ಆ್ಯಪ್‌ ಇನ್‌ಸ್ಟಾಲೇಷನ್‌ಗೆ ತಾಂತ್ರಿಕ ತೊಡಕು ಕಾಡಿದವು. ಕೆಲವೆಡೆ ಕಿಟ್‌ಗಳು ಸಿಗದೇ ಸಮೀಕ್ಷಕರು ಸಮೀಕ್ಷೆಯಿಂದ ದೂರ ಉಳಿದರು.

ಕಲಬುರಗಿಯ ಕಾಳಗಿ ತಾಲ್ಲೂಕು, ಯಾದಗಿರಿ ಜಿಲ್ಲೆಯ ಹುಣಸಗಿ, ರಾಯಚೂರಿನ ಸಿರವಾರದಲ್ಲಿ ಸಮೀಕ್ಷೆ ಕಿಟ್ ವಿಳಂಬವಾಗಿ ತಲುಪಿ ಸೋಮವಾರ ಸಮೀಕ್ಷೆ ನಡೆಯಲಿಲ್ಲ. ಕೆಲವೆಡೆ ಸಮೀಕ್ಷಕರಿಗೆ
ಒಟಿಪಿ ಸಮಸ್ಯೆ ಕಾಡಿತು. .

ಕೊಪ್ಪಳ ಗ್ರಾಮೀಣ, ಕುಷ್ಟಗಿ, ಯಲಬುರ್ಗಾ, ಗಂಗಾವತಿ, ಕಾರಟಗಿ ತಾಲ್ಲೂಕುಗಳಲ್ಲಿ ಒಟಿಪಿ ಮತ್ತು ಸರ್ವರ್‌ ಸಮಸ್ಯೆ ಕಾಡಿತು. ಕೈಪಿಡಿಯೇ ಬಂದಿಲ್ಲ, ಬೀದರ್‌ ಜಿಲ್ಲೆಯಲ್ಲಿ ಸಮೀಕ್ಷೆ ಮಧ್ಯಾಹ್ನ 3 ಗಂಟೆ ಬಳಿಕ ಆರಂಭಗೊಂಡಿತು. ಹಲವೆಡೆ ಮಳೆಯಿಂದ ತೊಡಕಾಯಿತು. 

ಸಿಬ್ಬಂದಿ ಕೊರತೆ

(ಹುಬ್ಬಳ್ಳಿ): ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸೇರಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆಗೆ ನೆಟ್‌ವರ್ಕ್, ಸಿಬ್ಬಂದಿ ಕೊರತೆ ಎದುರಾಯಿತು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದುಗೋಳ, ನವಲಗುಂದ, ಕಲಘಟಗಿ, ನವಲಗುಂದ, ಅಣ್ಣಿಗೇರಿ ತಾಲ್ಲೂಕುಗಳಲ್ಲಿ ‘ಆ್ಯಪ್‌’ ತೆರೆದುಕೊಳ್ಳಲಿಲ್ಲ. ‘ಒಟಿಪಿ’, ‘ನೆಟ್‌ವರ್ಕ್‌’ ಸಮಸ್ಯೆ ಎದುರಾಯಿತು.  ಅಳ್ನಾವರ ತಾಲ್ಲೂಕಿನಲ್ಲಿ ಸಮೀಕ್ಷಕರು ಹಂಚಿಕೆ ಸಮಸ್ಯೆಯಾಗಿತ್ತು.

‘ಕೆಲ ಹಳೆಯ ಮೊಬೈಲ್‌ ಫೋನ್‌ಗಳಲ್ಲಿ ‘ಆ್ಯಪ್‌’ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಸಮಸ್ಯೆ ಪರಿಹರಿಸಲು ಸಿಬ್ಬಂದಿ ಕ್ರಮ ವಹಿಸಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಸಿ.ಭಾನುಮತಿ ತಿಳಿಸಿದರು.

‘ಆ್ಯಪ್‌ನ ಸಮಸ್ಯೆ ಬಗೆಹರಿದ ನಂತರ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಸಮೀಕ್ಷಕರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವರು’ ಎಂದು ತಹಶೀಲ್ದಾರ್ ಮಹೇಶ ಗಸ್ತೆ ಹೇಳಿದರು.

ಅರಣ್ಯ, ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆಗೆ ಶಿಕ್ಷಕರ ನಿಯೋಜನೆಯಲ್ಲಿ ಗೊಂದಲಗಳಾದವು. ಶಿಕ್ಷಕರ ಶಾಲೆ ವ್ಯಾಪ್ತಿ ಬಿಟ್ಟು ದೂರದ ಪ್ರದೇಶಕ್ಕೆ ನಿಯೋಜಿಸಿರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಯಿತು.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಮಾತ್ರ ಸಕಾಲಕ್ಕೆ ಸಮೀಕ್ಷೆ ಆರಂಭವಾಯಿತು. ಕೂಡ್ಲಿಗಿಯಲ್ಲಿ ಆ್ಯಪ್‌ ಸಮಸ್ಯೆ ಇದ್ದರೆ, ಕೊಟ್ಟೂರಿನಲ್ಲಿ ಸರ್ವರ್ ಸಮಸ್ಯೆ ಕಾಡಿತು. ಬಳ್ಳಾರಿ ನಗರದಲ್ಲಿ ಸಮೀಕ್ಷೆ ಸುಗಮವಾಗಿತ್ತು.

‘ದಾರಿ ತೋರದ’ ಆ್ಯಪ್

(ದಾವಣಗೆರೆ): ಸಮೀಕ್ಷೆಗೆ ರೂಪಿಸಿದ್ದ ಆ್ಯಪ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದ ಗಣತಿ ಕಾರ್ಯಕ್ಕೆ ಮೊದಲ ದಿನವೇ ತೊಡಕುಂಟಾಯಿತು. ಬಹುತೇಕ ಸಮೀಕ್ಷಕರು ನಿಯೋಜಿತ ಬ್ಲಾಕ್‌ಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ.

ಆ್ಯ‍ಪ್‌ ಅಪ್ಡೇಟ್‌ಗೆ ಕಾಯುತ್ತ ಕುಳಿತ ಸಮೀಕ್ಷಕರು ಮಧ್ಯಾಹ್ನದ ಬಳಿಕ ಸಮೀಕ್ಷೆ ಕಾರ್ಯದಿಂದ ವಿಮುಖರಾದರು. ಮನೆ–ಮನೆಗೆ ತೆರಳಿದವರಿಗೆ ಒಟಿಪಿ ಸಮಸ್ಯೆಕಾಡಿತು. ಕೆಲವೆಡೆ ಮಧ್ಯಾಹ್ನ ಕಳೆದರೂ ಸಮೀಕ್ಷಕರಿಗೆ ಕಿಟ್‌ ಸಿಗಲಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಆ್ಯಪ್‌ನಲ್ಲಿ ಸ್ಥಳದ ಗುರುತು ತಪ್ಪಾಗಿ ತೋರಿ ಗೊಂದಲ ಮೂಡಿತು. 

ಕರಾವಳಿಯಲ್ಲಿ ಆಮೆಗತಿ

(ಮಂಗಳೂರು): ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆ್ಯಪ್ ಕೈಕೊಟ್ಟು, ಆಮೆಗತಿಯಲ್ಲಿ ಸಮೀಕ್ಷೆ ಕಾರ್ಯ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಕ್ಷೇತ್ರ ಕಾರ್ಯ ನಡೆಯಲಿಲ್ಲ. ‘ತಾಂತ್ರಿಕ ಸಮಸ್ಯೆ ಇತ್ತು. ಮಂಗಳವಾರದಿಂದ ಎಲ್ಲವೂ ಸಮಪರ್ಕವಾಗಿ ನಡೆಯುವ ಭರವಸೆ ಇದೆ’ ಎಂದು ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ರಾಜು ಪ್ರತಿಕ್ರಿಯಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವೆಡೆ ಮನೆ–ಮನೆ ಸರ್ವೆ ಆರಂಭವಾಗಿಲ್ಲ. ಕಡೂರಿನಲ್ಲಿ ಆ್ಯಪ್ ಓಪನ್ ಆಗಿಲ್ಲ ಎಂದು ತಹಶೀಲ್ದಾರರು ಮಾಹಿತಿ ನೀಡಿದರು.

‘ಎಲ್ಲೆಡೆ ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು, ಒಟಿಪಿ ಸಮಸ್ಯೆಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ. ತಾಂತ್ರಿಕ ತಂಡ ಸರಿಪಡಿಸಿದೆ‘ ಎಂದು ಚಿಕ್ಕಮಗಳೂರು ಡಿ.ಸಿ ಮೀನಾ ನಾಗರಾಜ್ ತಿಳಿಸಿದರು.

ಮೈಸೂರು ಭಾಗದಲ್ಲಿ ವಿಘ್ನ:

ಮೈಸೂರು ಭಾಗದ ಜಿಲ್ಲೆಗಳಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಮೊದಲ ದಿನವಾದ ಸೋಮವಾರವೇ ಹಲವು ವಿಘ್ನಗಳು ಎದುರಾಗಿ, ಕೆಲವೇ ಮನೆಗಳ ಸಮೀಕ್ಷೆಯಷ್ಟೇ ನಡೆಯಿತು. ಹಾಸನದಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿ
ಕೊಳ್ಳಲಷ್ಟೇ ಸಾಧ್ಯವಾಗಿದ್ದು, ಅಲ್ಲಿ ಮಂಗಳವಾರದಿಂದ ಶುರುವಾಗಲಿದೆ. 

ಚಾಮರಾಜನಗರ ಜಿಲ್ಲೆಯಲ್ಲಿ ವಿಳಂಬವಾದ ಕಾರಣ ಸಮೀಕ್ಷಕರು ಸಮೀಕ್ಷೆ ನಡೆಸದೇ ಮನೆಯ ಕಡೆಗೆ ಹೆಜ್ಜೆ ಹಾಕಿದರು ಎಂಬ ದೂರುಗಳು ಕೇಳಿಬಂದವು.

‌ಆರಂಭವಾಗದ ಸಮೀಕ್ಷೆ

(ತುಮಕೂರು): ಆ್ಯಪ್‌ನಲ್ಲಿ ಆಗಿರುವ ಬದಲಾವಣೆ, ಸರ್ವರ್‌ ಸಮಸ್ಯೆಯಿಂದಾಗಿ ತುಮಕೂರು ಜಿಲ್ಲೆಯಲ್ಲಿ ಸಮೀಕ್ಷೆ ಆರಂಭವಾಗಲಿಲ್ಲ.  

‘ಹೊಸ ಆ್ಯಪ್‌ ಆ್ಯಪ್ ಬಿಡುಗಡೆಯಾದ ನಂತರ ಸಮೀಕ್ಷೆ ಆರಂಭವಾಗಲಿದೆ. ಬದಲಾದ ಆ್ಯಪ್ ಕೊಟ್ಟ ನಂತರ ಜಾತಿ ಸಮೀಕ್ಷೆ ಪ್ರಾರಂಭಿಸಲಾಗುವುದು’ ಎಂದು ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಸಮೀಕ್ಷೆಗೆ ಆರಂಭದಲ್ಲೇ ತಾಂತ್ರಿಕ ಅಡಚಣೆ ಉಂಟಾಯಿತು. ಬೆಳಗ್ಗೆ ಆ್ಯಪ್‌ನಲ್ಲಿ ಮಾಹಿತಿ ನಮೂದಿಸಲು ಸಾಧ್ಯವಾಗಲಿಲ್ಲ.  

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊದಲ ದಿನ ಮಧ್ಯಾಹ್ನದ ನಂತರ ಸಮೀಕ್ಷೆ ಕಾರ್ಯ ಶರುವಾಯಿತು. ಜಿಲ್ಲೆಯಲ್ಲಿ 3,20,800 ಕುಟುಂಬಗಳನ್ನು ಜಿಯೊ ಟ್ಯಾಗ್ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ (ರಾಮನಗರ)  ಸಮೀಕ್ಷೆ ಮಾಡಬೇಕಾದ ಬ್ಲಾಕ್ ಕುರಿತು ಗಣತಿ
ದಾರರಲ್ಲೇ ಗೊಂದಲ ಇತ್ತು. ಕೈಪಿಡಿ ತಲುಪಿಲ್ಲ ಎಂಬ ದೂರುಗಳು ಕೇಳಿ ಬಂದವು.  

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಮೀಕ್ಷೆ ಆರಂಭವಾಯಿತು. ದೇವನಹಳ್ಳಿಯಲ್ಲಿ ತಹಶೀಲ್ದಾರ್ ಹಾಗೂ ಸಿಬ್ಬಂದಿ ಮಾಹಿತಿ ಪಡೆದು ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸಿದರು.

ಕರ್ತವ್ಯದಿಂದ ದೂರ ಉಳಿದ ಶಿಕ್ಷಕರು 

ಉಡುಪಿ ಜಿಲ್ಲೆಯಲ್ಲಿ ಶಿಕ್ಷಕರು ಸಮೀಕ್ಷೆಯ ಮೊದಲ ದಿನ ಕಾರ್ಯ ನಿರ್ವಹಿಸಲಿಲ್ಲ.

‘ಗಂಭೀರ ಆರೋಗ್ಯ ಸಮಸ್ಯೆ ಇರುವ ಮತ್ತು 59 ವರ್ಷ ಮೀರಿದ ಶಿಕ್ಷಕರನ್ನು, ಗರ್ಭಿಣಿ ಶಿಕ್ಷಕಿಯರನ್ನು ಗಣತಿ ಕಾರ್ಯದ ಕರ್ತವ್ಯದಿಂದ ಹೊರಗಿಡಬೇಕು ಎಂದು ನಾವು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೆವು. ಕ್ರಮ ಕೈಗೊಳ್ಳದ ಕಾರಣ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು ಮೊದಲ ದಿನದ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ’ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ. ದಿನಕರ ಶೆಟ್ಟಿ ಅಂಪಾರು ತಿಳಿಸಿದರು.

‘ಜಿಲ್ಲಾಡಳಿತದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಬೇಡಿಕೆಗೆ ಸ್ಪಂದಿಸುವ ಭರವಸೆ ಸಿಕ್ಕ ಕಾರಣ ಮಂಗಳವಾರದಿಂದ ಶಿಕ್ಷಕರು ಪಾಲ್ಗೊಳ್ಳುತ್ತಾರೆ’ ಎಂದರು.

‘ತಾಂತ್ರಿಕ ಸಮಸ್ಯೆ ಪರಿಹರಿಸಿದ್ದು, ಮಧ್ಯಾಹ್ನದ ನಂತರ ಸುಸೂತ್ರವಾಗಿ ನಡೆದಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್‌ ಗದ್ಯಾಳ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.