ಬೆಂಗಳೂರು: ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನ ಗಣತಿ) ವರದಿಯನ್ನು ಪ್ರಶ್ನಿಸಲಾದ ಅರ್ಜಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿರುವ ಹೈಕೋರ್ಟ್, ‘ಈ ಸಂಬಂಧ ಏನಿದ್ದರೂ ಪ್ರತ್ಯೇಕ ಮಧ್ಯಂತರ ಅರ್ಜಿ ಸಲ್ಲಿಸಿ’ ಎಂದು ಅರ್ಜಿದಾರರಿಗೆ ಸೂಚಿಸಿದೆ.
ಈ ಸಂಬಂಧ ಬೀದರ್‌ನ ಶಿವಾರಾಜ ಕಣಶೆಟ್ಟಿ, ಕೆ.ಸಿ.ಶಿವರಾಂ, ಬೆಂಗಳೂರಿನ ಬುಜೇಂದ್ರ, ನಟ ‘ಮುಖ್ಯಮಂತ್ರಿ’ ಚಂದ್ರು ಹಾಗೂ ಬೆಂಗಳೂರಿನ ‘ಸಮಾಜ ಸಂಪರ್ಕ ವೇದಿಕೆ’ ಅಧ್ಯಕ್ಷ ಜಿ.ಎನ್.ಶ್ರೀಕಂಠಯ್ಯ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ಶಿವರಾಜ ಕಣಶೆಟ್ಟಿ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಗಂಗಾಧರ ಆರ್.ಗುರುಮಠ ವಾದ ಮಂಡಿಸಲು ಮುಂದಾಗುತ್ತಿದ್ದಂತೆಯೇ, ಮುಖ್ಯ ನ್ಯಾಯಮೂರ್ತಿಗಳು, ‘ಇದರಲ್ಲಿ ತುರ್ತು ಏನಿದೆ, ಅವಸರ ಮಾಡಬೇಡಿ’ ಎಂದರು. ಇದಕ್ಕೆ ಪೂರಕವಾಗಿ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ‘ತುರ್ತು ಏನಿಲ್ಲ’ ಎಂದರು.
ಇದಕ್ಕೆ ಪ್ರತಿಯಾಗಿ ಗುರುಮಠ ಅವರು, ‘ಕಳೆದ ವಿಚಾರಣೆ ವೇಳೆ ನ್ಯಾಯಪೀಠ ನಮ್ಮ ಆಕ್ಷೇಪವನ್ನು ವಿವರವಾಗಿ ಆಲಿಸಿದೆ. ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ನೀಡಬೇಕು. ಅಂತೆಯೇ, ರಾಜ್ಯ ಸರ್ಕಾರ 2002ರ ಮಾರ್ಚ್ 30ರಂದು ರೂಪಿಸಿದ ಮೀಸಲಾತಿಯನ್ನು ಮುಂದುವರಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ವಾಗ್ದಾನ ನೀಡಿದೆ...’ ಎಂದು ವಿವರಿಸಲು ಮುಂದಾದರು. ಆದರೆ, ವಿವರಣೆಯನ್ನು ಲೆಕ್ಕಿಸದ ನ್ಯಾಯಪೀಠ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.