ಡಿ.ಕೆ ಶಿವಕುಮಾರ್
- ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಜಾತಿಗಣತಿ ವರದಿಯನ್ನು ವಿರೋಧಿಸಿದ ಬಿಜೆಪಿಯವರು, ಗೊಂದಲ ನಿವಾರಿಸಲು ಮರು ಸಮೀಕ್ಷೆ ನಡೆಸುವ ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿರುವುದೇಕೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ದೆಹಲಿಯಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಜಾತಿ ಗಣತಿ ವರದಿಯನ್ನು ಬಿಜೆಪಿಯವರು ತಮ್ಮ ಅವಧಿಯಲ್ಲಿ ಯಾಕೆ ಸ್ವೀಕರಿಸಲಿಲ್ಲ. ನಾವು ಈಗಾಗಲೇ ಸ್ವೀಕರಿಸಿರುವ ವರದಿಯನ್ನು ಬಳಸಿಕೊಂಡು, ಬಿಟ್ಟುಹೋಗಿರುವ ಅಂಕಿಅಂಶಗಳನ್ನು ಸೇರಿಸಲು ಅವಕಾಶ ನೀಡುತ್ತೇವೆ’ ಎಂದರು.
‘ನನ್ನನ್ನು ಭೇಟಿ ಮಾಡಿ ಜೈನ, ಲಂಬಾಣಿ, ಬೆಸ್ತ ಸೇರಿದಂತೆ ಅನೇಕ ಸಮುದಾಯದ ಜನರು ಈಗಾಗಲೇ ನಡೆದಿರುವ ಸಮೀಕ್ಷೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಪಕ್ಷದ ಶಾಸಕರೂ ತಮ್ಮ ಅಭಿಪ್ರಾಯ ತಿಳಿಸಿದ್ದರು. ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿದ್ದರೂ ಅನೇಕರು ತಮ್ಮ ಸಮುದಾಯವನ್ನು ಹೇಳಿಕೊಳ್ಳಲು ಹಿಂದೇಟು ಹಾಕಿದ್ದರು. ಹೊಸತಾಗಿ ಸಮೀಕ್ಷೆ ನಡೆಸುವ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೆಲವು ಮಾರ್ಗದರ್ಶನ ನೀಡಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ’ ಎಂದು ಹೇಳಿದರು.
ಜಾತಿ ಗಣತಿ ವಿಚಾರದಲ್ಲಿ ಪ್ರಬಲ ಜಾತಿಗಳ ಒತ್ತಡಕ್ಕೆ ಪಕ್ಷ ಮಣಿಯಿತೇ ಎಂಬ ಪ್ರಶ್ನೆಗೆ, ‘ನಾವು ಎಲ್ಲರ ಒತ್ತಡಕ್ಕೂ ಮಣಿದಿದ್ದೇವೆ. ಮಾಧ್ಯಮಗಳ ಒತ್ತಡಕ್ಕೂ ಮಣಿಯುತ್ತೇವೆ’ ಎಂದರು.
‘ವೀರಶೈವ, ಒಕ್ಕಲಿಗ ಸೇರಿದಂತೆ ವಿವಿಧ ಸಮುದಾಯಗಳ ಸ್ವಾಮೀಜಿಗಳು ಮರು ಸಮೀಕ್ಷೆ ನಡೆಸುವ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ಎಲ್ಲ ಸಮಾಜಗಳ ಸ್ವಾಮೀಜಿಗಳು ತಮ್ಮ ಸಮುದಾಯದವರಿಗೆ ತಿಳಿವಳಿಕೆ ನೀಡಿ ಹೊಸ ಸಮೀಕ್ಷೆಯಲ್ಲಿ ಸರಿಯಾಗಿ ವಿವರ ನೀಡುವಂತೆ ಮನವಿ ಮಾಡಬೇಕು’ ಎಂದರು.
ಕೇಂದ್ರ ಸರ್ಕಾರ ಜನಗಣತಿ ಜತೆ ಜಾತಿಗಣತಿಯನ್ನೂ ಮಾಡಲು ಮುಂದಾಗಿರುವಾಗ ರಾಜ್ಯ ಸರ್ಕಾರ ಸಮೀಕ್ಷೆ ನಡೆಸುವ ಅಗತ್ಯ ಇದೆಯೇ ಎಂದು ಕೇಳಿದಾಗ, ‘ಇದು ನಮ್ಮ ಪಕ್ಷದ ರಾಜಕೀಯ ಕಾರ್ಯಸೂಚಿ. ಇದನ್ನು ಬಿಜೆಪಿಯವರು ನಕಲು ಮಾಡಿದ್ದಾರೆ. ಜಾತಿಗಣತಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಬೇಕು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ’ ಎಂದು ಸಮರ್ಥನೆ ನೀಡಿದರು.
ಜಾತಿ ಗಣತಿ ವಿಚಾರದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಶಿವಕುಮಾರ್ ಮೇಲುಗೈ ಸಾಧಿಸಿದರೇ ಎಂದು ಕೇಳಿದಾಗ, ‘ಇದರಲ್ಲಿ ಯಾರ ಕೈ ಮೇಲಾಗುವ ವಿಚಾರ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.